ಮಂಗಳೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯೇ ಸೂಚಿಸಿದರೂ ಊರಿನ ಬಹು ಜನೋಪಯೋಗಿ ಬೇಡಿಕೆಯೊಂದು ಈಡೇರಿಲ್ಲ! ಆದರೆ ತಮ್ಮ ಗುರಿಯಿಂದ ವಿಮುಖರಾಗದ ಗ್ರಾಮಸ್ಥರು ತಾವೇ, ಸ್ವಂತ ಖರ್ಚಿನಲ್ಲಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಬಳಿಯ ಜನ ಇಂತಹ ವಿಪರ್ಯಾಸ ಪ್ರಸಂಗಕ್ಕೆ ಸಾಕ್ಷಿಯಾಗಿದ್ದಾರೆ.
ಇದು ಸಚಿವ ಎಸ್ ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ! ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಬಳಿಯ ಜನ ತಮ್ಮೂರಿನ ಹೊಳೆಗೆ ಶಾಶ್ವತ ಸೇತುವೆ ಬೇಕೆಂಬುದು ಪುರಾತನ ಮನವಿಯಾಗಿತ್ತು. ಸ್ಥಳೀಯ ಶಾಸಕ ಮತ್ತು ಸಚಿವರುಗಳಿಗೆ ಮನವಿ ಸಲ್ಲಿಸಿ, ಸಲ್ಲಿಸಿ ಪ್ರಯೋಜನಕಾರಿಯಾಗದೇ ನೇರವಾಗಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೂ ಮನವಿ ಮಾಡಿದ್ದರು. ಗ್ರಾಮಸ್ಥರು ತಾವೇ ವಿಡಿಯೋ ಸಿ.ಡಿ. ಕಳುಹಿಸಿ ಸೇತುವೆಗೆ ಮನವಿ ಮಾಡಿದ್ದರು. ತಕ್ಷಣವೇ ಪ್ರಧಾನಿ ಕಾರ್ಯಾಲಯದಿಂದ ಸಮಸ್ಯೆ ಬಗೆಹರಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಗೆ ಸೂಚನೆ ಬಂದಿತು. ಪ್ರಧಾನಿಯೇ ಸೂಚಿಸಿದರೂ ಸ್ಥಳೀಯ ಅಧಿಕಾರಿಗಳು ಇಚ್ಛಾ ಶಕ್ತಿ ಮೆರೆಯಲಿಲ್ಲ. ಇನ್ನೂ ಕಾದರೆ ಪ್ರಯೋಜನವಿಲ್ಲ ಅಂತಾ ತಾವೇ ಸಮಸ್ಯೆ ಬಗೆಹರಿಸಲು ಗುತ್ತಿಗಾರು ಗ್ರಾಮಸ್ಥರು ಮುಂದಾದರು.
ಅಂದಹಾಗೆ ಸುಳ್ಯದ ಈ ಗುತ್ತಿಗಾರು ಗ್ರಾಮವು ಸಚಿವ ಎಸ್. ಅಂಗಾರ ಪ್ರತಿನಿಧಿಸುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿದೆ! ಆದರೆ ಇಲ್ಲಿನ ಜನಪ್ರತಿನಿಧಿಗಳು ನೂರಾರು ಬಾರಿ ಮನವಿ ಮಾಡಿದರೂ ಗಣನೆಗೆ ತೆಗೆದುಕೊಳ್ಳಲಿಲ್ಲ. ಆಗ ಗ್ರಾಮಸ್ಥರು ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ತಾತ್ಕಾಲಿಕ ಕಬ್ಬಿಣದ ಸೇತುವೆಯನ್ನು ತಯಾರಿಸಿದರು.
ಗ್ರಾಮಸ್ಥರೇ ಮುಂದೆ ಬಂದು ತಮಗೆ ಅತ್ಯವಶ್ಯಕವಾಗಿದ್ದ ಸೇತುವೆ ನಿರ್ಮಾಣ ಕಾಮಗಾರಿ ಕೈಗೊಂಡರು. ಹಲವು ದಶಕಗಳಿಂದ ಎದುರಿಸುತ್ತಿದ್ದ ತೀವ್ರ ಸಮಸ್ಯೆಗೆ ಮುಕ್ತಿ ನೀಡಲು ಗ್ರಾಮಸ್ಥರೇ ಮುಂದಾದರು. ಹೊಳೆಯ ಇನ್ನೊಂದು ಭಾಗದಲ್ಲಿರುವ ಶಾಲೆ ಮತ್ತು ಅಂಗನವಾಡಿ ಕೇಂದ್ರ ತಲುಪುವುದು ಗುತ್ತಿಗಾರು ಗ್ರಾಮಸ್ಥರ ಅಗತ್ಯವಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಪೋಷಕರು ಹೊಳೆಯಲ್ಲಿ ಮಕ್ಕಳನ್ನು ಹಿಡಿದು ಶಾಲೆಗೆ ತಲುಪಿಸುತ್ತಿದ್ದರು. ಅದನ್ನು ಅನೇಕ ಬಾರಿ ನೋಡಿಯೂ ಇಲ್ಲಿನ ಜನಪ್ರತಿನಿಧಿಗಳು/ ಅಧಿಕಾರಿಗಳ ಮನಸ್ಸು ಕರಗಿರಲಿಲ್ಲ; ತಮ್ಮ ಜವಾಬ್ದಾರಿಯನ್ನೂ ಪೂರೈಸಲಿಲ್ಲ ಎಂಬುದು ಖೇದಕರ ಸಂಗತಿ.