ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ “ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು
ನಟಿ ಜಯಶ್ರೀ ರಿಯಾಲಿಟಿ ಶೋ ಬಿಗ್‍ಬಾಸ್ ಮೂಲಕವೇ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ.
ಅಲ್ಲದೇ ಮನೆಯ ಸಮೀಪ ಇರುವವರು ಕೂಡಲೇ ಹೋಗಿ ಅವರನ್ನು ಭೇಟಿ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು. ನಂತರ ಸ್ನೇಹಿತರು ಜಯಶ್ರೀಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಜಯಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸುರಕ್ಷಿತವಾಗಿದ್ದಾರೆ ಎಂದು ನಟಿ ಅಶ್ವಿತಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಟಿ ಜಯಶ್ರೀ ಕೂಡ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ” ಎಂದು ಈಗ ಪೋಸ್ಟ್ ಮಾಡಿದ್ದಾರೆ.
ನಟಿ ಜಯಶ್ರೀ ಕಳೆದ ಕೆಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ನೊಂದಿದ್ದ ಜಯಶ್ರೀ ಇತ್ತೀಚೆಗೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದರು. ಆದರೆ ಹಲವು ಕಾರಣಕ್ಕೆ ವೈಯಕ್ತಿಕವಾಗಿ ಅವರು ಕುಗ್ಗಿದ್ದರು ಎನ್ನಲಾಗಿದೆ.
ಈ ಹಿಂದೆ ನಟಿ ಜಯಶ್ರೀ ರಾಮಯ್ಯಗೆ ಸ್ವಂತ ಸೋದರಮಾವನೇ ಕಿರುಕುಳ ನೀಡಿದ್ದು, ನಡುರಾತ್ರಿ ಎಂಬುದನ್ನೂ ಲೆಕ್ಕಿಸದೆ ಮನೆಯಿಂದ ಹೊರಹಾಕಿದ್ದರು. ಈ ಕುರಿತು ನಟಿ ಜಯಶ್ರೀ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.