ಕಲಬುರಗಿ ಜಿಲ್ಲೆಯ ಕಮಲಾಪುರ(Kamalapura, Kalaburagi) ತಾಲೂಕಿನ ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆಯಾಗಿದೆ.
ಸೃಷ್ಟಿ ಮಾರುತಿ (21) ಮೃತ ಯುವತಿ. ಸೃಷ್ಟಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಡಿಸೆಂಬರ್ 13ರಿಂದ ಕಾಣೆಯಾಗಿದ್ದಳು.
ಡಿಸೆಂಬರ್ 13ರಂದು ಕಾಲೇಜ್ಗೆ ಹೇಳಿ ಹೋಗಿದ್ದ ಸೃಷ್ಟಿ ಸಂಜೆಯಾದ್ರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದರು. ಮೃತ ಸೃಷ್ಟಿ ಮಾರುತಿ ಕಮಲಾಪುರ ತಾಲ್ಲೂಕಿನ ನಾವದಗಿ ಗ್ರಾಮದ ನಿವಾಸಿಯಾಗಿದ್ದಳು. ಇದೀಗ ಸೃಷ್ಟಿ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶವ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಇನ್ನು ಮಗಳ ಸಾವಿನ ಬಗ್ಗೆ ಪೋಷಕರು ಯಾರ ಮೇಲೆಯೂ ಅನುಮಾನ ವ್ಯಕ್ತಪಡಿಸಿಲ್ಲ. ಈ ಹಿನ್ನೆಲೆ ಇದೊಂದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೃಷ್ಟಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರದ ಕಾರಣ ಪೊಲೀಸರು ಕುಟುಂಬಸ್ಥರು ಮತ್ತು ಆಕೆಯ ಗೆಳತಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.
ಡಿಸೆಂಬರ್ 13ರಂದು ಮನೆಯಿಂದ ಹೊರ ಹೋಗಿದ್ದ ಸೃಷ್ಟಿ ಶವ ಡಿಸೆಂಬರ್ 16ರಂದು ಪತ್ತೆಯಾಗಿದೆ. ಡಿಸೆಂಬರ್ 13ರಂದೇ ಸೃಷ್ಟಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ