ಬೆಳಗಾವಿ: ‘ಸುಪ್ರೀಂ ಕೋರ್ಟ್‌ನಲ್ಲಿ ನಿರ್ಧಾರ ಆಗುವವರೆಗೆ ಗಡಿ ವಿಚಾರದಲ್ಲಿ ಕರ್ನಾಟಕ- ಮಹಾರಾಷ್ಟ್ರ ಯಾವುದೇ ಬೇಡಿಕೆ ಇಡಬಾರದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ನಿರ್ಣಯದಂತೆ ಎಂಇಎಸ್ ಬೆಳಗಾವಿಯಲ್ಲಿ ನಡೆಸುವ ಯಾವುದೇ ಕರ್ನಾಟಕ ವಿರೋಧಿ ಚಟುವಟಿಕೆಗಳನ್ನು ಮಹಾರಾಷ್ಟ್ರ ಸರ್ಕಾರ ಅಥವಾ ಅಲ್ಲಿಯ ನಾಯಕರು ಬೆಂಬಲಿಸಬಾರದು.
ಮಹಾ ಮೇಳಾವ್‌ದಲ್ಲಿಯೂ ಭಾಗವಹಿಸಬಾರದು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದ್ದಾರೆ.
‘ಎರಡೂ ರಾಜ್ಯಗಳ ತಲಾ ಮೂವರು ಸಚಿವರ ಸಮಿತಿ ರಚಿಸಲು ಶಾ ತೀರ್ಮಾನಿಸಿದ್ದು ಒಳ್ಳೆಯ ಹೆಜ್ಜೆ. ಕರ್ನಾಟಕದಲ್ಲಿ 2018ರಿಂದಲೂ ಗಡಿ ಉಸ್ತುವಾರಿ ಸಚಿವರೇ ಇಲ್ಲ. ಈಗಲಾದರೂ ಬೊಮ್ಮಾಯಿ ಸರ್ಕಾರ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಈ ದಿಸೆಯತ್ತ ನೇಮಕ ಮಾಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಿರಿಯ ಐಪಿಎಸ್ ಅಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸುವ
ಬದಲಾಗಿ, ಉಭಯ ರಾಜ್ಯಗಳ ತಲಾ ಒಬ್ಬ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ಇಂಥ ಸಮಿತಿ ರಚನೆಯಾಗಬೇಕು’
ಎಂದಿದ್ದಾರೆ.
‘1956ರ ರಾಜ್ಯ ಪುನರ್ ವಿಂಗಡನಾ ಕಾನೂನನ್ನು 50 ವರ್ಷಗಳ ನಂತರ ಮಹಾರಾಷ್ಟ್ರವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಕಾಲಬಾಹ್ಯ ಹಾಗೂ ಅಸಂಬದ್ಧವಾಗಿದೆ ಎಂದೂ ವಾದಿಸಬೇಕು’ ಎಂದೂ ಅವರು ಆಗ್ರಹಿಸಿದ್ದಾರೆ.