ಕಲಬುರಗಿ: ದ ಪ್ರಮುಖ ಆರೋಪಿಗಳಾದ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದ ಆರ್.ಡಿ. ಪಾಟೀಲ ಹಾಗೂ ಅವರ ಅಣ್ಣ, ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ ಅವರಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠವು ಗುರುವಾರ ಜಾಮೀನು ಮಂಜೂರು ಮಾಡಿದೆ.
ಕೆಲ ದಿನಗಳ ಹಿಂದೆ ವಾದ ವಿವಾದವನ್ನು ಆಲಿಸಿದ್ದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠವು ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿತ್ತು.
ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಪಿಎಸ್‌ಐ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಆರ್.ಡಿ. ಪಾಟೀಲ ಮತ್ತು ಮಹಾಂತೇಶ ಪಾಟೀಲ ತಮಗೆ ಹಣ ನೀಡಿದ ಅಭ್ಯರ್ಥಿಗಳಿಗೆ ಬ್ಲೂಟೂತ್ ಉಪಕರಣದ ಮೂಲಕ ಉತ್ತರ ಹೇಳಿಸಿ ಪಾಸ್ ಆಗುವಂತೆ ಮಾಡಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಇಬ್ಬರೂ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು.
ಪ್ರಕರಣದ ತನಿಖೆಗಾಗಿ ರಚನೆಯಾದ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದ ತನಿಖಾ ತಂಡ ಏಪ್ರಿಲ್ 22ರಂದು ಮಹಾಂತೇಶ ಪಾಟೀಲ ಅವರನ್ನು ಬಂಧಿಸಿತ್ತು. ಅದಾದ ಕೆಲ ದಿನಗಳಲ್ಲಿಯೇ ಮಧ್ಯರಾತ್ರಿ ಆರ್.ಡಿ. ಪಾಟೀಲ ಸಿಐಡಿ ಪೊಲೀಸರಿಗೆ ಶರಣಾಗಿದ್ದರು.
ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ ಜೆಎಂಎಫ್‌ಸಿ ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. ಸುಮಾರು ಎಂಟು ತಿಂಗಳ ಬಳಿಕ ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಂತಾಗಿದೆ.