ಬೆಂಗಳೂರು ಮಾ. 32 : ಬೇಸಿಗೆ ಸಮಯದಲ್ಲಿ ಬೆಂಗಳೂರಿನಲ್ಲಿ ಇಂದು ಧಾರಾಕಾರ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಕರೋನಾ ಮಹಾಮಾರಿ ರಾಜ್ಯದೆಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಇದರ ನಡುವೆಯೇ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರಿತಪಿಸುವಂತಾಗಿದೆ.
ಬೆಳಗ್ಗೆಯಿಂದಲೇ ಬಿಸಿಲ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹವಾಮಾನದಲ್ಲಿ ಹಲವಾರು ಬದಲಾವಣೆಯಾಗಿ ಈ ರೀತಿ ಧಾರಾಕಾರ ಮಳೆ ಸುರಿಯುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ನಿನ್ನೆಯಷ್ಟೇ ರಾಜ್ಯಾದ್ಯಂತ ನಡೆದಂತಹ ಜನತಾ ಕರ್ಫ್ಯೂ ನಡುವೆ ಜನರು ಮನೆಯಲ್ಲಿ ಇದ್ದರು. ಇಡೀ ರಾಜ್ಯ ಸ್ತಬ್ಧಗೊಂಡಿತ್ತು ಆದರೆ ಇಂದೂ ಕೂಡ ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಿರುವುದರಿಂದ ಬೆಂಗಳೂರಿಗೆ ಬರುವಂತಹ ವಾಹನಗಳನ್ನು ತಡೆಯಲಾಗುತ್ತಿತ್ತು. ಈ ನಡುವೆ ಬೆಂಗಳೂರಿನಲ್ಲಿ ಅಕಾಲಿಕ ಮಳೆಗೆ ಜನರಿಗೆ ಬೇಸಿಗೆಯ ಬಿಸಿ ತಣಿಸಿದೆ. ಜೊತೆಗೆ ಆತಂಕವನ್ನೂ ಕೂಡ ಹೆಚ್ಚಿಸಿದೆ.