ಬೆಂಗಳೂರು, ಮಾ.23- ಕರ್ನಾಟಕದಲ್ಲಿ ಮತ್ತೊಬ್ಬರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಬೆಳಗ್ಗೆ ಒಟ್ಟು ಸೋಂಕಿತರ ಸಂಖ್ಯೆ 27ಕ್ಕೆ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಕೊರೊನಾ ರೋಗದ ಭೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಏಕಕಾಲಕ್ಕೆ ಒಂದು ಸಾವಿರ ವೆಂಟಿಲೆಟರ್‍ಗಳನ್ನು ಖರೀದಿಸಲು ಮುಂದಾಗಿದೆ.
ಇಂದು ಬೆಳಗ್ಗೆ ವಿಕಾಸಸೌಧದಲ್ಲಿ ಅಧಿಕಾರಿಗಳು ಹಾಗೂ ಖಾಸಗಿ ಕಂಪೆನಿಗಳ ಜೊತೆ ಚರ್ಚೆ ಮಾಡಿ, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನಿನ್ನೆ ಘೋಷಣೆ ಮಾಡಿದ್ದಾರೆ.
ಅದೇ ರೀತಿ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆಗಾಗಿ ಮೀಡಲಿಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.ಕೊರೊನಾ ಸೋಂಕು ಪೀಡಿತರಿಗೆ ವೆಂಟಿಲೇಟರ್‍ಗಳ ಅಗತ್ಯ ಇದೆ. ಅದಕ್ಕಾಗಿ ಮೈಸೂರಿನ ಸ್ಕ್ಯಾನ್ ರೇ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚೆ ನಡೆಸಲಾಗಿದೆ. ಒಂದು ಸಾವಿರ ವೆಂಟಿಲೆಟರ್‍ಗಳನ್ನು ಪೂರೈಸಲು ಖರೀದಿ ಆದೇಶ ನೀಡಲಾಗಿದೆ. ಅದೇ ರೀತಿ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳಲು 10 ಲಕ್ಷ ಎನ್ 95 ಮಾಸ್ಕ್‍ಗಳು, ಮೂರು ಪದರಗಳ 15 ಲಕ್ಷ ಮಾಸ್ಕ್‍ಗಳು, ಪಿಪಿ ಕಿಟ್‍ಗಳು 5 ಲಕ್ಷ ಖರೀದಿಗೆ ಆದೇಶ ಮಾಡಲಾಗಿದೆ. ಲಭ್ಯತೆ ಆಧರಿಸಿ ಥರ್ಮಲ್ ಸ್ಕ್ಯಾನರ್ ಸೇರಿ ಇತರ ಸಲಕರಣೆಗಳ ಖರೀದಿ ನಡೆಯುತ್ತಿದೆ ಎಂದು ಹೇಳಿದರು.
ನಾಳೆಯಿಂದ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು. ಜಿಲ್ಲೆಗಳಲ್ಲಿನ ಮೂಲಸೌಲಭ್ಯ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ಸ್ಥಳೀಯವಾಗಿ ಆಸ್ಪತ್ರೆಗಳನ್ನು ಸುಧಾರಿತ ಮಟ್ಟದಲ್ಲಿ ಕಾಪಾಡಿಕೊಳ್ಳಲಾಗುವುದು. ತುರ್ತು ಸಂದರ್ಭಗಳನ್ನು ಹೆದುರಿಸಲು ಅಗತ್ಯವಾದ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯದ ಎಂಟು ಜಿಲ್ಲೆಗಳಲ್ಲಿ ಲಾಕ್‍ಡೌನ್ ಘೋಷಿಸಲಾಗಿದೆ. ಆದರೂ ಕೆಲವರು ಸಾರ್ವಜನಿಕವಾಗಿ ಸಂಚಾರ ಮಾಡುತ್ತಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಕ್ವಾರೈಂಟನ್ ಅವಧಿ ಮೀರಿ ಬಹಿರಂಗವಾಗಿ ಸಂಚರಿಸುತ್ತಿದ್ದರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಐಟಿ-ಬಿಟಿ ಕಂಪೆನಿಗಳು ಶೇ.84ರಷ್ಟು ಮಂದಿಗೆ ಮನೆಯಿಂದ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿವೆ. ಉಳಿದಂತೆ ಅವಶ್ಯಕತೆ ಇರುವ ಕೆಲಸಗಳನ್ನು ಹೊರತು ಪಡಿಸಿ ಉಳಿದ ಸಿಬ್ಬಂದಿಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ನಿನ್ನೆವರೆಗೂ ಸೋಂಕಿತರ ಸಂಖ್ಯೆ 26ರಷ್ಟಿತ್ತು, ಇಂದು ಮೈಸೂರಿನಲ್ಲಿ ಮತ್ತೊಬ್ಬರಿಗೆ ಸೋಂಕು ಹರಡಿದ್ದು, ಸೋಂಕಿತರ ಸಂಖ್ಯೆ ಒಟ್ಟು 27ರಷ್ಟಾಗಿದೆ ಎಂದು ಶ್ರೀರಾಮುಲು ಹೇಳಿದರು.
ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮಾತನಾಡಿ, ಜನರು ಆದಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು. ಸರ್ಕಾರ ಕಾಲಕಾಲಕ್ಕೆ ನೀಡುವ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಯಾವುದೇ ರೀತಿಯ ಆತಂಕ ಬೇಡ. ಮುನ್ನೇಚ್ಚರಿಕೆ ವಹಿಸಿದರೆ ಸಾಕು ಎಂದು ಹೇಳಿದರು.