ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ!
ಕಳೆದ ಬಿಗ್ ಬಾಸ್ ಸೀಜ಼ನ್ನಿನಲ್ಲಿ ಸ್ಪರ್ಧಿಸಿದ್ದ ಕಿಶನ್ ಗೊತ್ತಲ್ಲಾ? ವಯ್ಯಾರಿಯಂತೆ ನುಲಿಯುವ ಕಿಶನ್ ಕಿಸ್ಸಿಂಗ್ ಸ್ಟಾರ್ ಅನ್ನೋ ಪಟ್ಟ ಪಡೆದು ನೋಡುಗರಿಗೆ ಬಲು ಮಜಾ ಕೊಟ್ಟಿದ್ದ. ಈಗ ಹುಟ್ಟೂರಿಗೆ ಬಂದು ಸನ್ಮಾನ ಸ್ವೀಕರಿಸಲೂ ಕಾಸು ಕೇಳಿ ಮಕ್ಕುಗಿಸಿಕೊಂಡಿದ್ದಾನೆ.
ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಹೆಸರು ಮಾಡಿ, ನಂತರ ಬಿಗ್ ಬಾಸ್ ಸ್ಪರ್ಧಿಯಾದ ಕಿಶನ್ ಬೆಳಗಲಿ ಮೂಲತಃ ಚಿಕ್ಕಮಗಳೂರಿನವನು. ಡ್ಯಾನ್ಸು, ರಿಯಾಲಿಟಿ ಶೋ ಅಂತಾ ಹುಡುಗ ಹಂತಹಂತವಾಗಿ ಬೆಳೆಯುತ್ತಿದ್ದಾನೆ ಅನ್ನೋ ಕಾರಣಕ್ಕೆ ಮೂಡಿಗೆರೆ ಮಂದಿ ಸನ್ಮಾನಕ್ಕೆ ಆಹ್ವಾನಿಸಿದ್ದರು. ಆಗ ಈ ಹುಡುಗ ನಡೆದುಕೊಂಡ ಪರಿಯನ್ನು ಕಂಡು ಕಾಫಿ ನಾಡಿನ ಜನತೆ ಅಕ್ಷರಶಃ ಮುಖ ಕಿವುಚುತ್ತಿದ್ದಾರೆ.
ಏನೋ ನಮ್ಮ ಊರಿನ ಹುಡುಗ ಅಂತಾ ಜನ್ನಾಪುರದ ಗವಿಕಲ್ ಕ್ಲಬ್ ಸಂಸ್ಥಾಪಕ ಹಂತೂರು ಸತೀಶ್ ಅವರೇ ಕರೆ ಮಾಡಿ ಈತನನ್ನು ಸನ್ಮಾನಕ್ಕೆಂದು ಆಹ್ವಾನಿಸಿದ್ದರು. ಮೊದಲಿಗೆ ಕಿಶನ್ ಫ್ಲೈಟ್ ಬುಕ್ ಮಾಡಿಕೊಡಿ ಅಂದಿದ್ದ. ಆಯ್ತು ಅಂತಾ ಒಪ್ಪಿದ ಮೇಲೆ, ‘ನಾನು ಕಾರ್ಯಕ್ರಮಕ್ಕೆ ಬರಬೇಕೆಂದರೆ ಇಷ್ಟು ಅಮೌಂಟು ಕೊಡಿ’ ಅಂತಲೂ ಡಿಮ್ಯಾಂಡ್ ಮಾಡಲು ಶುರು ಮಾಡಿದ. ‘ಆಯ್ತು ಕೊಡ್ತೀವಿ ಬಾ’ ಎಂದೇ ಮೊದಲಿಗೆ ಹೇಳಿದ್ದರು. ಇನ್ನೇನು ಫಂಕ್ಷನ್ನಿಗೆ ಎಂಟು ದಿನ ಬಾಕಿ ಇದೆ ಎನ್ನುವಾಗ ಮತ್ತೆ ನಗದು ರೂಪದಲ್ಲಿ ಹಣ ಸಂದಾಯ ಮಾಡಿ ಅಂತಾ ಹಠ ಹಿಡಿದ. ಅಲ್ಲಿಗೆ ಈ ಹುಡುಗನ ಅಸಲಿಯತ್ತು ಸತೀಶ್ ಅವರಿಗೂ ಗೊತ್ತಾಗಿತ್ತು. “ಕರೆಯುತ್ತಿರೋದು ಸನ್ಮಾನ ಮಾಡಲಿಕ್ಕೆ. ನಿನಗೆ ಹಣ ಕೊಟ್ಟು ಕೂರಿಸುವ ದರ್ದು ನಮಗಿಲ್ಲ. ಯಾವುದೇ ಕಾರಣಕ್ಕೂ ದುಡ್ಡು ಕೊಡೋ ಮಾತೇ ಇಲ್ಲ. ಇಷ್ಟ ಇದ್ದರೆ ಬಾ. ಇಲ್ಲದಿದ್ದರೆ ಬಿಡು” ಅಂತಾ ಮಕ್ಕುಗಿದು ಸುಮ್ಮನಾದರು. ಅಷ್ಟಕ್ಕೇ ಈ ಕಿಶನ್ ಎಂಥಾ ಯಡವಟ್ಟು ಕೆಲಸ ಮಾಡಿಬಿಟ್ಟ ಗೊತ್ತಾ? ಏಕಾ ಏಕಿ ತನ್ನದೇ ಫೇಸ್ ಬುಕ್ ವಾಲ್’ನಲ್ಲಿ “ಗವಿಕಲ್ ಕ್ಲಬ್ ನಲ್ಲಿ ನಡೆಯುತ್ತಿರೋ ಈ ಇವೆಂಟು ಫೇಕ್” ಅಂತ ಪೋಸ್ಟ್ ಮಾಡಿಬಿಟ್ಟ.
ಜನ್ನಾಪುರದ ಗವಿಕಲ್ ಕ್ಲಬ್ ಕಳೆದ ೫ ವರ್ಷಗಳಿಂದ ಇವೆಂಟುಗಳನ್ನು ನಡೆಸುತ್ತಾ ಬರುತ್ತಿದೆ. ಇಲ್ಲಿ ನಡೆಯುತ್ತಿರುವ ಫ್ಯಾಷನ್ ಅಂಡ್ ಶೋ ಕಾಂಪಿಟೇಶನ್ ಹಲವಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ಸಿನಿಮಾ ಮತ್ತು ಸೀರಿಯಲ್ಲುಗಳಲ್ಲಿ ಮಿಂಚುತ್ತಿರುವ ಸಾಕಷ್ಟು ಕಲಾವಿದರೂ ಈ ವೇದಿಕೆಯೇರಿದ್ದಾರೆ.
ಗವಿಕಲ್ ಕ್ಲಬ್ ಮಲೆನಾಡಿಗರ ಪಾಲಿಗೆ ನೆಮ್ಮದಿಯ ತಾಣವಾಗಿದೆ. ಇದರ ಫೌಂಡರ್ ಹಂತೂರು ಸತೀಶ್ ಅಂದರೆ ಎಲ್ಲರಲ್ಲೂ ಗೌರವದ ಭಾವನೆಯಿದೆ. ಇಷ್ಟು ದಿನ ಸತೀಶ್ ಅವರು ಯಾರನ್ನೇ ಆಹ್ವಾನಿಸಿದಾಗಲೂ ಪ್ರತಿಯೊಬ್ಬರೂ ಪ್ರೀತಿಯಿಂದಲೇ ಬಂದು ಹೋಗಿದ್ದಾರೆ. ಕ್ಲಬ್ ಕೂಡಾ ಬಂದ ಅತಿಥಿ, ಕಲಾವಿದರನ್ನು ಅಷ್ಟೇ ಗೌರವದಿಂದ ನಡೆಸಿಕೊಂಡಿದೆ. ಹೀಗಿರುವಾಗ ಏನೇನೂ ಅಲ್ಲದ, ಡ್ಯಾನ್ಸು, ರಿಯಾಲಿಟಿ ಶೋಗಳಲ್ಲಿ ಒಂದಿಷ್ಟು ಫೇಮಸ್ ಆಗಿರುವ ಕಿಶನ್ ಅನ್ನೋ ಎಳಸು ಹುಡುಗ ಇಷ್ಟೊಂದು ತಿಮಿರು ತೋರುವುದಾ? ಕಾಫಿ ನಾಡಿನ ಜನತೆಯಾಗಲಿ, ಮತ್ಯಾರೇ ಆಗಲಿ ಈತನನ್ನು ಪ್ರೀತಿಯಿಂದ ಮತ್ತೆಂದಾದರೂ ಕರೆಯಲು ಸಾಧ್ಯವಾ? ಪ್ರೀತಿ ವಿಶ್ವಾಸಗಳನ್ನೂ ಹಣದ ಮೂಲಕ ಅಳೆಯಲು ಹೋದರೆ ಪ್ರತಿಭೆಯೆನ್ನೋದು ತಳ ಹಿಡಿದು ಸೀದು ಹೋಗೋದಿಲ್ವಾ? ಯಾಕೆ ಇವೆಲ್ಲಾ ಕಿಶನ್ ಥರದ ಹುಡುಗರಿಗೆ ಅರ್ಥವಾಗುತ್ತಿಲ್ಲವೋ ಗೊತ್ತಿಲ್ಲ.