“ನನ್ನ ಹುಟ್ಟುಹಬ್ಬದಂದು ಮನೆ ಬಳಿ ಬರಬೇಡಿ ಪ್ಲೀಸ್” : ಅಭಿಮಾನಿಗಳಲ್ಲಿ ಅಪ್ಪು ಮನವಿ
ಬೆಂಗಳೂರು,ಮಾ.14- ದೇಶಾದ್ಯಂತ ಕೊರೋನ ಭೀತಿ ಹಿನ್ನೆಲೆಯಲ್ಲಿ ನಾನು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ದಯವಿಟ್ಟು ಅಭಿಮಾನಿಗಳ್ಯಾರು ಮನೆ ಬಳಿ ಬರಬಾರದು ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಹುಟ್ಟು ಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲ. ದಯವಿಟ್ಟು ಮನೆ ಬಳಿ ಬಂದು ನಿರಾಶರಾಗದಿರಿ. ಕೊರೋನ ಸೋಂಕು ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶಕ್ಕೆ ನಾವೆಲ್ಲರೂ ಬದ್ಧರಾಗಿರೋಣ ಎಂದು ಕೋರಿದ್ದಾರೆ. ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳಿಗೆ ನಾವೆಲ್ಲರೂ ಸಹಕರಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಮಾ.17ರಂದು ಪುನೀತ್ ರಾಜ್‍ಕುಮಾರ್ ಅವರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಅವರ ಮನೆ ಬಳಿ ಸೇರಿ ಹುಟ್ಟುಹಬ್ಬ ಆಚರಿಸಬೇಕೆಂದುಕೊಂಡಿದ್ದ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಉಂಟಾಗಿದೆ.
ಕರೊನಾ ವೈರಸ್ ರಾಜ್ಯದಲ್ಲಿಯೂ ಕಾಣಿಸಿಕೊಂಡಿದೆ. ರಾಜ್ಯದ ಆರು ಜನರಲ್ಲಿ ವೈರಸ್ ಪತ್ತೆಯಾಗಿದ್ದು, ವೈರಸ್ ಹರಡದಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸರ್ಕಾರ ಆದೇಶಿಸಿದೆ. ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಿದ್ದ ಸರ್ಕಾರ ಇಂದಿನಿಂದ ಒಂದು ವಾರದ ಕಾಲ ಬರ್ತ್ಡೇ, ಮದುವೆ ಕಾರ್ಯಕ್ರಮಗಳನ್ನೂ ಸಹ ನಡೆಸದಿರುವಂತೆ ಆದೇಶಿಸಿದೆ.