Home / ಜಿಲ್ಲೆ / ಆಟಗಾರರನ್ನು ಎಲ್ಲಿಂದ ತರುತ್ತೀರಿ? ಐಪಿಎಲ್ ಮರೆತುಬಿಡಿ – ದಾದಾ

ಆಟಗಾರರನ್ನು ಎಲ್ಲಿಂದ ತರುತ್ತೀರಿ? ಐಪಿಎಲ್ ಮರೆತುಬಿಡಿ – ದಾದಾ

Spread the love

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಗಳಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಿಸಿಸಿಐ ಪದಾಧಿಕಾರಿಗಳೊಂದಿಗೆ ಮಾತನಾಡಿದ ನಂತರ ಐಪಿಎಲ್ ಅನ್ನು ಮತ್ತಷ್ಟು ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಾಗುತ್ತದೆ. ಆದರೆ ಪ್ರಾಯೋಗಿಕವಾಗಿ ಹೇಳುವುದಾದರೆ, ಕೊರೊನಾ ವೈರಸ್‍ನಿಂದಾಗಿ ಪ್ರಪಂಚದ ಎಲ್ಲೆಡೆ ಜೀವನವು ಸ್ಥಗಿತಗೊಂಡಿರುವಾಗ ಕ್ರೀಡೆಯಲ್ಲಿ ಭವಿಷ್ಯ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ವೈರಸ್‍ನಿಂದ ಉಂಟಾಗಿರುವ ಸದ್ಯದ ಪರಿಸ್ಥಿತಿಯನ್ನು ನಾವು ನೋಡುತ್ತಿದ್ದೇವೆ. ಪ್ರಸ್ತುತ ಕ್ಷಣದಲ್ಲಿ ನಾವು ಏನನ್ನೂ ಹೇಳಲು ಸಾಧ್ಯವಿಲ್ಲ. ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿವೆ, ಜನರು ಮನೆಯಲ್ಲಿ ಲಾಕ್‍ಡೌನ್ ಆಗಿದ್ದಾರೆ. ಕಚೇರಿಗಳು ಲಾಕ್ ಆಗಿವೆ. ಯಾರೂ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಮೇ ಮಧ್ಯದವರೆಗೆ ಇದೇ ವಾತಾವರಣ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ ಎಂದು ಗಂಗೂಲಿ ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಆಟಗಾರರನ್ನು ನೀವು ಎಲ್ಲಿಂದ ಕರೆದುಕೊಂಡು ಬರಲು ಸಾಧ್ಯ. ಹೋಗಲಿ ಆಟಗಾರರು ಪ್ರಯಾಣಿಸುವ ಅವಕಾಶ ಎಲ್ಲಿದೆ? ಈ ಸಮಯದಲ್ಲಿ ಪ್ರಪಂಚದ ಯಾವುದೇ ದೇಶದಲ್ಲೂ ಕ್ರೀಡೆಯ ಪರವಾದ ವಾತಾವರಣವಿಲ್ಲ. ಹೀಗಾಗಿ ಐಪಿಎಲ್ ಅನ್ನು ಮರೆತುಬಿಡಿ ಅಂತ ಹೇಳುವುದು ಸರಳ, ಸಾಮಾನ್ಯ ಜ್ಞಾನವಾಗಿದೆ ಎಂದು ದಾದಾ ತಿಳಿಸಿದರು.

ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ದೇಶಾದ್ಯಂತ ಹಲವಾರು ರಾಜ್ಯಗಳು ಲಾಕ್‍ಡೌನ್ ಅನ್ನು ವಿಸ್ತರಿಸಿವೆ. ಏಪ್ರಿಲ್ 15ರಂದು ಕೊನೆಗೊಳ್ಳಬೇಕಿದ್ದ ಲಾಕ್‍ಡೌನ್ ಏಪ್ರಿಲ್ 30ರವರೆಗೂ ವಿಸ್ತರಣೆಗೊಂಡಿದೆ. ಕೊರೊನಾ ಭೀತಿ ಹಿನ್ನೆಯಲ್ಲಿ ಮಾರ್ಚ್ 29ರಂದು ನಡೆಯಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು. ಆದರೆ ದೇಶದಲ್ಲಿ ಕೊರೊನಾ ಆತಂಕ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಟೂರ್ನಿ ನಡೆಯುತ್ತೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ.

ಬಿಸಿಸಿಐ ಅಧಿಕಾರಿಯೊಬ್ಬರು ಶನಿವಾರ ಮಾತನಾಡಿ, ”ಪಂಜಾಬ್, ಮಹಾರಾಷ್ಟ್ರ ಮತ್ತು ಕರ್ನಾಟಕ ಈಗಾಗಲೇ ಲಾಕ್‍ಡೌನ್ ವಿಸ್ತರಿಸುವುದಾಗಿ ಹೇಳಿವೆ. ಐಪಿಎಲ್ ಸದ್ಯಕ್ಕೆ ನಡೆಯುವ ಸಾಧ್ಯತೆ ಇಲ್ಲ. ಆದರೆ ಟೂರ್ನಿ ಖಂಡಿತವಾಗಿಯೂ ರದ್ದುಗೊಳ್ಳುವುದಿಲ್ಲ. ಅನಿರ್ದಿಷ್ಟವಾಗಿ ಮುಂದೂಡಲಾಗುವುದು” ಎಂದು ತಿಳಿಸಿದ್ದರು.

”ನಾವು ಐಪಿಎಲ್ ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ಬಿಸಿಸಿಐಗೆ 3,000 ಕೋಟಿ ರೂ. ನಷ್ಟವಾಗಿದೆ. ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳೊಂದಿಗೆ ಪರಿಹಾರವನ್ನು ಕಂಡುಕೊಳ್ಳುವ ಕೆಲಸ ಮಾಡುತ್ತಿದೆ. ಆದರೆ ಅದಕ್ಕಾಗಿ ಕೊರೊನಾದಿಂದ ಉಂಟಾಗಿರುವ ಆತಂಕವು ಸಾಮಾನ್ಯ ಸ್ಥಿತಿಗೆ ಮರಳಬೇಕಾಗಿದೆ. ಆಗ ಐಪಿಎಲ್ ಟೂರ್ನಿ ನಡೆಸಬಹುದು” ಎಂದು ಹೇಳಿದ್ದರು.

ಬಿಸಿಸಿಐ ಮುಂದೆ ಸದ್ಯ ಎರಡು ಆಯ್ಕೆಗಳಿವೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಐಪಿಎಲ್ ಆಯೋಜಿಸಬೇಕು. ಇಲ್ಲವೆ ಐಸಿಸಿ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಹಾಗೂ ಫ್ರಾಂಚೈಸ್‍ಗಳು ಒಪ್ಪಿದರೆ ಟಿ20 ವಿಶ್ವಕಪ್ ನಂತರ ಐಪಿಎಲ್ ಟೂರ್ನಿ ನಡೆಸುವುದು.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ