ಬೆಂಗಳೂರು, ಮಾ : ಭಾರತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಪಾಕಿಸ್ತಾನಕ್ಕೆ ಜೈ ಅನ್ನುವವರು ಯಾರೇ ಆಗಲಿ ಎಷ್ಟೇ ಪ್ರಭಾವಿಗಳಾಗಲಿ ಅಂತಹವರನ್ನು ನಿರ್ದಾಕ್ಷಿಣ್ಯ ವಾಗಿ ಬಂಧಿಸಿ ಜೈಲಿಗೆ ಹಾಕುತ್ತೇವೆ ಎಂದು ವಿಧಾನ ಪರಿಷತ್ ಸಭಾ ನಾಯಕ ಹಾಗೂ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದರು.
ಸಂವಿಧಾನದ ಮೇಲೆ ಮುಂದುವರೆದ ಚರ್ಚೆಯಲ್ಲಿ ಜೆಡಿಎಸ್‍ನ ಟಿ.ಎ.ಶರವಣ ಅವರು ಸಿಎಎ ವಿರೋಧಿಸುವವರನ್ನು ಇಂದು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ವರನ್ನು ಸರ್ಕಾರ ಬಂಧಿಸಿ ಜೈಲಿಗೆ ಹಾಕುತ್ತಿದೆ. ಇದೇನು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಬಿಜೆಪಿ ಸದಸ್ಯರು, ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಕಾನೂನಾತ್ಮಕವಾಗಿ ಪ್ರತಿಭಟನೆ ಮಾಡು ವವರನ್ನು ಎಲ್ಲಿಯೂ ಬಂಧಿಸಿಲ್ಲ. ದೇಶದಲ್ಲಿದ್ದುಕೊಂಡು ಭಾರತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುವವರನ್ನು ಸುಮ್ಮನೆ ಬಿಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ನಮ್ಮದೇನೂ ಅಭ್ಯಂತರವಿಲ್ಲ. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವವರ ವಿರುದ್ಧ ಸುಮ್ಮನೆ ಕೂರುವುದಿಲ್ಲ. ನಾವು ಮತಕ್ಕೋಸ್ಕರ ಏನನ್ನೂ ಮಾಡುತ್ತಿಲ್ಲ. ಇದೇನು ರಣ ಹೇಡಿ ಸರ್ಕಾರವಲ್ಲ. ಯಾರೇ ಇರಲಿ ಬಂಧಿಸಿಯೇ ತೀರುತ್ತೇವೆ. ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದರು.
ಈ ವೇಳೆ ಪುನಃ ಸಭೆಯಲ್ಲಿ ಗದ್ದಲವಾಗಿ ಕೋಲಾಹಲ ಉಂಟಾಯಿತು. ಕಾಂಗ್ರೆಸ್‍ನ ಜಯಮಾಲಾ ಅವರು ಮಾತನಾಡಿ, ನೀವು ಎಲ್ಲಿಯೂ ಯಾರ ಮೇಲೂ ಸುಳ್ಳು ಪ್ರಕರಣ ದಾಖಲಾಗಿಲ್ಲ ಎಂದು ಹೇಳುತ್ತಿದ್ದೀರಿ. ಕರ್ನಾಟಕ ಮತ್ತಿತರ ಕಡೆ ಪ್ರತಿಭಟನೆ ನಡೆಸಿದವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. 33 ಕೋಟಿ ಜನರು ಇಂದು ಆತಂಕದಲ್ಲಿದ್ದಾರೆ. ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಭಟನೆಯಲ್ಲಿ ಪಾಲ್ಗೊಂ ಡವರ ಮೇಲೆ ಎಲ್ಲಿಯೂ ಕೂಡ ಸುಳ್ಳು ಮೊಕದ್ದಮೆ ದಾಖಲಿಸಿಲ್ಲ. ಭಾರತದ ವಿರುದ್ಧ ಧಿಕ್ಕಾರ , ಘೋಷಣೆ ಕೂಗಿರುವವರ ವಿರುದ್ಧ ಮಾತ್ರ ದೂರು ದಾಖಲಿಸಿದ್ದೇವೆ. ಈ ದೇಶದಲ್ಲಿ ಇದ್ದುಕೊಂಡು ದೇಶದ್ರೋಹ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆಗ ಕಾಂಗ್ರೆಸ್‍ನ ಸದಸ್ಯರು ಬಿಜೆಪಿ ಯವರ ವಿರುದ್ಧ ತಿರುಗಿ ಬಿದ್ದು ನೀವೇನು ಭಾರತವನ್ನು ಗುತ್ತಿಗೆ ತೆಗೆದು ಕೊಂಡಿದ್ದೀರಾ. ರಾಷ್ಟ್ರಪ್ರೇಮ ನಿಮ್ಮಿಂದ ಕಲಿಯಬೇಕಾದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. ಪ್ರತಿಭಟನೆ ನಡೆಸುವುದು ನಮ್ಮ ಹಕ್ಕು . ಅದನ್ನು ಕಿತ್ತುಕೊಳ್ಳುವುದು ಸರಿಯೇ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದರು.