ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಲಾಕ್‍ಡೌನ್ ಉಲ್ಲಂಘಿಸಿ ಕೆಲವೊಂದು ಮದ್ಯ ಮಾರಾಟಗಾರರು ಕದ್ದು ಮುಚ್ಚಿ ಮಾರಾಟ ಮಾಡುವುದು ಬೆಳಕಿಗೆ ಬಂದಿದೆ. ಕಳೆದ 25ದಿನಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ವಿವಿಧಕಡೆ ದಾಳಿ ನಡೆಸಿ 40 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.
ಮದ್ಯ ಮಾರಾಟಗಾರರು ತಮ್ಮ ಅಂಗಡಿ ಕಳ್ಳತನವಾಗಿದೆ ಎಂದು ಪ್ರತಿ ಬಿಂಬಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು, ನಿಮ್ಮ ಬಳಿ ಇರುವ ಮದ್ಯ ಮತ್ತು ಬೀಯರ್ ದಾಸ್ತಾನನ್ನು ಸಂರಕ್ಷಿಸಿಕೊಳ್ಳುವಂತೆ ಸೂಚಿಸಿದೆ. ಜೊತೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಿರುವ ನಾಲ್ಕು ಲೈಸೆನ್ಸ್ ಗಳನ್ನು ರದ್ದುಗೊಳಿಸಲು ಹಾಗೂ ಕ್ರಮ ಜರುಗಿಸಲು ಮುಂದಾಗಿದೆ.
ಹುಬ್ಬಳ್ಳಿಯ ಒರಿಜಿನಲ್ ಬಾರ್ ಅಂಡ್ ರೆಸ್ಟೋರೆಂಟ್, ಧಾರವಾಡದ ವೈಶಾಲಿ ಹೋಟೆಲ್, ದುರ್ಗಾ ವೈನ್ಸ್ ಧಾರವಾಡ ಹಾಗೂ ಶ್ರೀನಿಧಿ ಎಂಟಪ್ರ್ರೈಸ್‍ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆದಿತ್ತು. ಈ ಬಗ್ಗೆ ಮಾಹಿತಿ ಪಡೆದಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದಿದ್ದರು. ಜೊತೆಗೆ ಈ ನಾಲ್ಕು ಬಾರ್ ಗಳ ಪರವಾನಿಗೆ ರದ್ದುಗೊಳಿಸಲು ಅಬಕಾರಿ ಇಲಾಖೆ ಮುಂದಾಗಿದೆ.
ಮಾರ್ಚ್ 21ರಿಂದ ಏಪ್ರಿಲ್ 15ರವರೆಗೆ ಎರಡು ಕಳ್ಳಬಟ್ಟಿ ಅಡ್ಡೆ ಸೇರಿದಂತೆ 213 ಕಡೆಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 11 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪೈಕಿ 9 ಆರೋಪಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈವರೆಗೂ ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 7,494 ಲೀಟರ್ ಮದ್ಯ ಹಾಗೂ 9,089 ಲೀಟರ್ ಬೀಯರ್, 2.5 ಲೀಟರ್ ನೀರು ಮಿಶ್ರಿತ ಮದ್ಯ ಸಾರ ಸೇರಿದಂತೆ ಒಟ್ಟು 40 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.
ಧಾರವಾಡ ಜಿಲ್ಲೆಯಲ್ಲಿನ ಎಲ್ಲಾ 276 ಮದ್ಯದ ಅಂಗಡಿಗಳನ್ನು ಈಗಾಗಲೇ ಬಂದ್ ಮಾಡಲಾಗಿದೆ. ಹೀಗಿದ್ದರೂ ಅಕ್ರಮ ಚಟುವಟಿಕೆ ನಡೆದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಇಲಾಖೆಯ ಉಪ ಆಯುಕ್ತ ಶಿವನಗೌಡ ಮನವಿ ಮಾಡಿದ್ದಾರೆ.