ಹಾವೇರಿ:. : ಗೂಡ್ಸ್ ವಾಹನ ಪ್ರಯಾಣಿಕರ ತಡೆಗೆ ಕಠಿಣ ಕ್ರಮಕೈಗೊಳ್ಳಬೇಕು. ವಾಹನ ಚಾಲಕ ಹಾಗೂ ಕ್ಲೀನರ್ ಸೇರಿದಂತೆ ಎರಡು ಜನರಿಗಿಂತ ಹೆಚ್ಚು ಪ್ರಯಾಣಿಸದಂತೆ ಚೆಕ್‍ಪೋಸ್ಟ್‍ಗಳಲ್ಲಿ ತಡೆಯಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೋನಾ ತಡೆಗಾಗಿ ರಚಿಸಲಾದ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಹೊರ ಜಿಲ್ಲೆಗಳಿಂದ ಜಿಲ್ಲಾ ಗಡಿ ಪ್ರವೇಶಮಾಡುವ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಅವರ ವಿವರ ಸಂಗ್ರಹಿಸಬೇಕು. ಜಿಲ್ಲೆಯ ಯಾವ ಗ್ರಾಮಕ್ಕೆ ತೆರಳುತ್ತಾರೆ ಎಂಬ ಮಾಹಿತಿಯನ್ನು ಆಯಾ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿನಿಮಯಮಾಡಿಕೊಂಡು ಕಡ್ಡಾಯವಾಗಿ ಹೋಂ ಕ್ವಾರೆಂಟೈನ್‍ನಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಿನಸಿ ಸಾಮಾಗ್ರಿಗಳ ಅಂಗಡಿಗಳ ತೆರೆಯಲು ಯಾವುದೇ ಸಮಯ ನಿರ್ಭಂಧವಿಲ್ಲ. ಅವರು ಅಂಗಡಿಗಳನ್ನು ದಿನಪೂರ್ತಿ ತೆರೆಯಬಹುದು. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನಗಳಲ್ಲಿ ತೆರಳುವ ಚಾಲಕರು ಹಾಗೂ ಕ್ಲೀನರ್‍ಗಳ ಆರೋಗ್ಯ ತಪಾಸಣೆಯನ್ನು ಕನಿಷ್ಠ ವಾರಕ್ಕೊಮ್ಮೆ ನಡೆಸಬೇಕು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಬರುವ ಲಾರಿಗಳ ಚಾಲಕರು ಹಾಗೂ ಕ್ಲೀನರ್‍ಗಳ ಹೊರತುಪಡಿಸಿ ಇತರರನ್ನು ಗಡಿಭಾಗದಲ್ಲಿ ತಡೆಯಬೇಕು. ಈ ನಿಟ್ಟಿನಲ್ಲಿ ಆಂಧ್ರಗಡಿಭಾಗದ ರಾಯಚೂರು ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಚರ್ಚಿಸಿಲು ತೀರ್ಮಾನಿಸಲಾಯಿತು.
ಅಗತ್ಯ ತುರ್ತು ಸಂದರ್ಭಗಳಲ್ಲಿ ಒಂದು ದ್ವಿಚಕ್ರವಾಹನದಲ್ಲಿ ಒಬ್ಬರಿಗೆ ಮಾತ್ರ ಪ್ರಯಾಣಿಸಲು ಹಾಗೂ ಪರವಾನಿಗೆ ಪಡೆದ ಸಾಗಾಣಿಕೆ ವಾಹನದಲ್ಲಿ ಇಬ್ಬರಿಂದ ಗರಿಷ್ಠ ಮೂವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ಚೆಕ್ ಪೋಸ್ಟ್‍ಗಳಲ್ಲಿ ಪ್ರತಿ ವಾಹನಗಳ ಮಾಹಿತಿ ದಾಖಲಿಸಬೇಕು. ಪಾಸ್ ಪಡೆದು ಜಿಲ್ಲೆಗೆ ಪ್ರವೇಶಮಾಡುವವರ ಕಡ್ಡಾಯವಾಗಿ 14 ದಿನ ಹೋಂ ಕ್ವಾರೆಂಟೈನ್‍ನಲ್ಲಿ ಇಡಬೇಕು. ಕೆಲವರು ಕಾಲ್ನಡಿಗೆಯಿಂದ ಬೇರೆ ಬೇರೆ ಊರುಗಳಿಂದ ಜಿಲ್ಲೆಗೆ ಪ್ರವೇಶಮಾಡುತ್ತಿದ್ದಾರೆ. ಬಹುಪಾಲು ಜನ ಚೆಕ್‍ಪೋಸ್ಟ್ ತಪ್ಪಿಸಿ ಬೇರೆ ಮಾರ್ಗದಲ್ಲಿ ಬರುತ್ತಿದ್ದಾರೆ. ಇಂತಹವರ ಮೇಲೆ ತೀವ್ರ ನಿಗಾವಹಿಸಬೇಕು. ಗ್ರಾಮೀಣ ಮಟ್ಟದ ಕಾರ್ಯಪಡೆಗಳಿಂದ ಮಾಹಿತಿ ಪಡೆಯಬೇಕು ಎಂದು ತಿಳಿಸಿದರು. ಕ್ವಾರೆಂಟೈನ್ ತಂಡ ಈ ಕುರಿತಂತೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ವಲಸೆ ಕಾರ್ಮಿಕರಿಗೆ, ವಸತಿ ರಹಿತ ಕಾರ್ಮಿಕರಿಗೆ ಯಾವುದೇ ಆಹಾರ ಸಾಮಗ್ರಿಗಳು ಕೊರತೆಯಾಗದಂತೆ ಕ್ರಮವಹಿಸಿ. ಲಾಕ್‍ಡೌನ್ ಅವಧಿ ಪೂರ್ಣಗೊಳ್ಳುವವರೆಗೂ ಅವರ ಮನವೊಲಿಸಿ ಅಗತ್ಯ ಸೌಕರ್ಯ ಕಲ್ಪಿಸಿ. ಸಣ್ಣ ಪುಟ್ಟ ಕ್ಷೌರಿಕ ಅಂಗಡಿವರಿಗೂ ನೆರವು ಒದಗಿಸುವ ಕುರಿತಂತೆ ಪರಿಶೀಲನೆ ನಡೆಸಿ ಎಂದು ಸಲಹೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡಿರುವುದರಿಂದ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಷ್ಟೇ ನಿಯಂತ್ರಣಮಾಡಿದರೂ ಜನಸಂದಣಿ ಹೆಚ್ಚಾಗುತ್ತಿದೆ. ಹಾವೇರಿ ಕೃಷಿ ಉತ್ಪನ್ನ ಮಾರುಕಟ್ಟೆಯ ಕೆಲ ದಲ್ಲಾಳಿ ಅಂಗಡಿಗಳನ್ನು ಕರ್ನಾಟಕ ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಕುರಿತಂತೆ ಅಗತ್ಯ ಕ್ರಮವಹಿಸಲು ನಿರ್ಧರಿಸಲಾಯಿತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತಂತೆ ಜಾಗೃತಿ ಮೂಡಿಸಲು ಪೊಲೀಸ್‍ರೊಂದಿಗೆ ಸಹಕಾರಕ್ಕೆ ಸ್ವಯಂ ಸೇವಾ ಸಂಘಟನೆಗಳು, ಶಿಕ್ಷಕರು ಹಾಗೂ ಕರೋನಾ ವಾರಿಯರ್‍ಗಳನ್ನ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.
ಮನೆ ಮನೆ ಆರೋಗ್ಯ ತಪಾಸಣೆ ನಡೆಸುತ್ತಿರುವ ವೈದ್ಯರಿಗೆ ಸುರಕ್ಷತಾ ಸಾಮಗ್ರಿಗಳನ್ನು ನೀಡಲು ಸೂಚನೆ ನೀಡಲಾಯಿತು. ಎಲ್ಲ ತಂಡಗಳು ಸಕ್ರೀಯವಾಗಿ ತೊಡಗಿಸಿಕೊಂಡು ಸರ್ಕಾರದ ಮಾರ್ಗಸೂಚಿಗಳ ಅನುಷ್ಠಾನದ ಮೇಲೆ ನಿಗಾವಹಿಸಲು ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ, ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಡಿ.ವೈ.ಎಸ್.ಪಿ. ವಿಜಯಕುಮಾರ ಸಂತೋಷ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶ್ರೀಮತಿ ಚೈತ್ರಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಕಾರ್ಮಿಕ ಅಧಿಕಾರಿ ಶ್ರೀಮತಿ ಲಲಿತಾ ಸಾತೇನಹಳ್ಳಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
