Breaking News

ಆಹಾರ, ತರಕಾರಿ ಸುಗಮ ಸರಬರಾಜಿಗೆ ವ್ಯವಸ್ಥೆ – ಡಿಸಿ ಕೆ.ಬಿ ಶಿವಕುಮಾರ್

Spread the love

ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಪ್‍ಕಾಮ್ಸ್ ನೆರವಿನಿಂದ ಪ್ರತಿ ವಾರ್ಡಿನಲ್ಲಿ ತರಕಾರಿ ಮಾರಾಟ ಮಾಡಲು ಹಾಗೂ ಪ್ಯಾಕ್ಡ್ ಆಹಾರ ಮನೆ ಬಾಗಿಲಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ತರಕಾರಿ, ಹಾಲು ಹಣ್ಣು, ಮೀನು, ಮಾಂಸ, ದಿನಸಿ ವಸ್ತುಗಳಂತಹ ಅವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೋಳಿ ಜ್ವರ ಹಿನ್ನೆಲೆಯಲ್ಲಿ ಮಾರ್ಚ್ 31ರವರೆಗೆ ಮಾತ್ರ ಚಿಕನ್ ಮಾರಾಟ ನಿರ್ಬಂಧಿಸಲಾಗಿದೆ. ಶುಕ್ರವಾರದ ಒಳಗಾಗಿ ಹಾಪ್‍ಕಾಮ್ಸ್ ವತಿಯಿಂದ ವಾಹನದ ಮೂಲಕ ಪ್ರತಿ ವಾರ್ಡಿನಲ್ಲಿ ನಿಗದಿತ ದರದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಹೊಟೇಲ್‍ಗಳನ್ನು ಅವಲಂಬಿಸಿರುವವರನ್ನು ಗಮನದಲ್ಲಿರಿಸಿ ಮನೆ ಬಾಗಿಲಿಗೆ ಸಿದ್ಧ ಆಹಾರ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಐದು ವಾರ್ಡುಗಳಿಗೆ ಒಬ್ಬರಂತೆ ಗುತ್ತಿಗೆದಾರರನ್ನು ಗುರುತಿಸಿ, ಆಯಾ ವಾರ್ಡುಗಳಲ್ಲಿ ಬೇಡಿಕೆ ಅನುಸರಿಸಿ ಆಹಾರ ಒದಗಿಸಲು ವ್ಯವಸ್ಥೆ ಮಾಡಬೇಕು. ಕೆಲವು ಸೀಮಿತ ಮೆನು ಸಿದ್ಧಪಡಿಸಿ, ದರವನ್ನು ನಿಗದಿಪಡಿಸಬೇಕು. ಆಹಾರ ವಿತರಿಸುವವರಿಗೆ ಗುರುತಿನ ಚೀಟಿ ನೀಡಲಾಗುವುದು. ಆಹಾರದ ಗುಣಮಟ್ಟವನ್ನು ಮಹಾನಗರ ಪಾಲಿಕೆ ಖಾತ್ರಿಪಡಿಸಬೇಕು. ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹ ಅಗತ್ಯವಿದ್ದರೆ ಈ ವ್ಯವಸ್ಥೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಆಸ್ಪತ್ರೆಗಳ ಹತ್ತಿರ ಇರುವ ಹೊಟೇಲ್‍ಗಳನ್ನು ತೆರೆದಿಟ್ಟು, ಆಹಾರ ತಿನಿಸುಗಳನ್ನು ಪಾರ್ಸೆಲ್ ಕೊಂಡೊಯ್ಯಲು ಅವಕಾಶ ನೀಡಲಾಗುವುದು. ಕುವೆಂಪು ರಸ್ತೆಯಲ್ಲಿರುವ ಇಂತಹ ಹೊಟೇಲ್‍ಗಳನ್ನು ತೆರೆಯಲು ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಡಿಸಿ ತಿಳಿಸಿದರು. ಅಗತ್ಯವಿರುವವರಿಗೆ ಆಹಾರ ಸಾಮಾಗ್ರಿ, ಅವಶ್ಯಕ ವಸ್ತುಗಳನ್ನು ವಿತರಿಸಲು ಬಯಸುವ ಸರ್ಕಾರೇತರ ಸಂಸ್ಥೆಗಳು ಹಾಗೂ ಸಂಘಸಂಸ್ಥೆಗಳು ಈ ಕುರಿತು ಜಿಲ್ಲಾಡಳಿತದಿಂದ ಅನುಮತಿಯನ್ನು ಪಡೆಯಬೇಕು. ಅಂತವರಿಗೆ ಗುರುತಿನ ಚೀಟಿಯನ್ನು ಒದಗಿಸಲಾಗುವುದು. ಸಾಮಾಗ್ರಿಗಳನ್ನು ವಿತರಣೆ ಮಾಡುವವರು ಮಾಸ್ಕ್, ಗ್ಲೌಸ್ ಸೇರಿದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು

ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ಬೆಂಗಳೂರಿನಿಂದ ಬಂದವರಿಗೆ ಮನೆಯೊಳಗೆ ಸ್ವಯಂ ಬಂಧನದಲ್ಲಿರುವಂತೆ(ಹೋಂ ಕ್ವಾರೆಂಟೈನ್) ಸೂಚನೆ ನೀಡಬೇಕು. ಅವರ ಮೇಲೆ ನಿಗಾ ಇರಿಸಿ, ನಿರಂತರವಾಗಿ ಅವರ ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತು ಎಲ್ಲಾ ಪಿಡಿಒಗಳು ನಿಗದಿತ ನಮೂನೆಯಲ್ಲಿ ವರದಿಯನ್ನು ಸಲ್ಲಿಸಬೇಕು. ಹೋಂ ಕ್ವಾರೆಂಟೈನ್ ಇಡೀ ಕುಟುಂಬಕ್ಕೆ ಅನ್ವಯವಾಗಲಿದ್ದು, ಆ ಮನೆಯ ಸದಸ್ಯರು ಹೊರಗೆ ಬಂದರೆ ನೆರೆಹೊರೆಯವರು ಮಾಹಿತಿಯನ್ನು ಒದಗಿಸಲು ಸೂಚಿಸುವಂತೆ ಡಿಸಿ ತಿಳಿಸಿದರು. ಅಲ್ಲದೇ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕ್ರಿಮಿನಾಶಕ ಸ್ಪ್ರೇ ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಾಂತರಾಜು, ಜಿಲ್ಲಾ ಪಂಚಾಯತ್ ಸಿಇಒ ಎಂ.ಎಲ್ ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

HC ಮಹದೇವಪ್ಪ ಸೇರಿದಂತೆ ಕಾಂಗ್ರೆಸ್ ನಾಯಕರ ನಿವಾಸಗಳಿಗೆ ಭೇಟಿ ನೀಡಿದ ಜಾರಕಿಹೊಳಿ

Spread the love ಮೈಸೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ನಗರದಲ್ಲಿ ಮಂಗಳವಾರ ಸಚಿವ ಎಚ್.ಸಿ. ಮಹದೇವಪ್ಪ ಸೇರಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ