ಮಂಗಳೂರು: ಲಾಕ್ ಡೌ ನ್ ಹಿನ್ನಲೆಯಲ್ಲಿ ನೀಡಲಾದ ಆಹಾರದ ಕಿಟ್‌ನಲ್ಲಿ ಬಾಲಕನೊಬ್ಬನಿಗೆ ಚಿನ್ನದ ಉಂಗುರ ಸಿಕ್ಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಆದ್ರೆ ಸಿಕ್ಕ ಉಂಗುರವನ್ನು ಬಾಲಕ ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾನೆ.
ಕೊರೊನಾ ಭೀತಿಯಿಂದ ದೇಶವೇ ಲಾಕ್‌ಡೌನ್ ಆಗಿದ್ದು, ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಹಲವು ಕಡೆಗಳಲ್ಲಿ ದಾನಿಗಳು ಬಡವರಿಗೆ ಆಹಾರ ಹಾಗೂ ಆಹಾರದ ಕಿಟ್‌ಗಳನ್ನು ನೀಡುತ್ತಿದ್ದಾರೆ. ಅದರಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ವಾರ್‌ರೂಮ್ ಮುಖಾಂತರ ಪುತ್ತೂರಿನ ಬಂಟರ ಸಂಘದ ವತಿಯಿಂದ ಆಹಾರ ಕಿಟ್ ನೀಡಲಾಗಿತ್ತು. ಅದರಂತೆ ಹನೀಫ್ ಎಂಬುವವರಿಗೂ ಆಹಾರದ ಕಿಟ್ ನೀಡಲಾಗಿತ್ತು. ಇದನ್ನು ಅವರು ಮನೆಗೆ ತೆಗೆದುಕೊಂಡು ಹೋಗಿದ್ದು, ಮನೆಯಲ್ಲಿ ಹನೀಫ್ ಪುತ್ರ ಹುಕಾಸ್ ಕಿಟ್ ತೆರೆದು ನೋಡಿದಾಗ ಅದರಲ್ಲಿ ಬಂಗಾರದ ಉಂಗುರ ಸಿಕ್ಕಿದೆ.
ಸಿಕ್ಕ ಉಂಗುರವನ್ನು ತನ್ನಲ್ಲಿ ಇಟ್ಟುಕೊಳ್ಳದ ಮರಳಿ, ವಾರಸುದಾರರಾದ ಬಾಲಕೃಷ್ಣ ಘಾಟೆ ಎಂಬುವವರಿಗೆ ಹಿಂದಿರುಗಿಸಿದ್ದಾನೆ. ಇನ್ನು ಬಾಲಕನ ಪ್ರಾಮಾಣಿಕತೆ ಕಂಡು ಪುತ್ತೂರು ಶಾಸಕ ಸಂಜೀವ ಮಠಂದೂರು ಬಾಲಕನಿಗೆ ಸನ್ಮಾನ ಮಾಡಿದ್ದಾರೆ.