ಬೆಂಗಳೂರು: ಇಂದು ಚಂದನವನದ ಅಪ್ಪಾಜಿ, ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ ಪುಣ್ಯಸ್ಮರಣೆ. ಇಂದಿಗೆ ಡಾ. ರಾಜ್‍ಕುಮಾರ್ ನಮ್ಮನ್ನು ಅಗಲಿ 14 ವರ್ಷಗಳು ಆಯ್ತು. ಪ್ರತಿವರ್ಷ ರಾಜ್‍ಕುಮಾರ್ ಅವರ ಅಭಿಮಾನಿಗಳು ಅನ್ನಸಂತರ್ಪಣೆ, ಬಟ್ಟೆ ದಾನ, ರಕ್ತದಾನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂದು ರಾಜ್ ಕುಟುಂಬಸ್ಥರು ಸಮಾಧಿ ಸ್ಥಳಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಬೆಳಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕುಟುಂಬಸ್ಥರ ಸಮೇತವಾಗಿ ಆಗಮಿಸಿ ತಂದೆಯವರ ಸಮಾಧಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಿವರಾಜ್‍ಕುಮಾರ್, ನಾವು ಅಪ್ಪಾಜಿ ಇಲ್ಲ ಎಂದು ಅಂದುಕೊಂಡಿಲ್ಲ. ಅವರ ಕಣ್ಣುಗಳು ಜಗತ್ತನ್ನು ನೋಡುತ್ತಿವೆ. ಲಾಕ್‍ಡೌನ್ ಆಗಿದ್ದರಿಂದ ಎಲ್ಲರೂ ಬರದೇ ಕೆಲವರು ಅಪ್ಪಾಜಿ ಸಮಾಧಿಗೆ ಬಂದು ನಮಸ್ಕರಿಸಿದ್ದೇವೆ ಎಂದು ತಿಳಿಸಿದರು.
ಕೊರೊನಾ ವೈರಸ್ ಮಹಾಮಾರಿ ತಡೆಗೆ ಸಾಮಾಜಿಕ ಅಂತರವೇ ಮದ್ದು. ಯಾರು ಹೆಚ್ಚಾಗಿ ಸೇರಬೇಡಿ. ಜನರು ಸಹಕಾರ ಕೊಟ್ರೆ ಅದಷ್ಟು ಬೇಗ ಕೊರೊನಾ ಮಹಾಮಾರಿಯಿಂದ ಮುಕ್ತಿ ಪಡೆಯಬಹುದು. ಸಿನಿಮಾ ಇಂಡಸ್ಟ್ರಿಯಿಂದ ಯಾರು ಕೂಡ ಇಲ್ಲಿಯ ತನಕ ಕಷ್ಟ ಅಂತ ಸಂಪರ್ಕ ಮಾಡಿಲ್ಲ. ಲಾಕ್‍ಡೌನ್ ತಿಳಿಗೊಂಡ ನಂತರ ಸಿನಿಮಾ ಯೂನಿಟ್ ಅವರನ್ನ ಸಂಪರ್ಕ ಮಾಡಿ ಸಹಾಯ ಮಾಡುತ್ತೇವೆ ಎಂದು ಹೇಳಿದರು