ದಾವಣಗೆರೆ: ಕೋವಿಡ್-19 ಸೋಂಕು ಹರಡದಂತೆ ಲಾಕ್ ಡೌನ್ ಮಾಡಲಾಗಿದ್ದರೂ ಜನ ಹೊರ ಬರುತ್ತಿರುವುದನ್ನು ಮಟ್ಟ ಹಾಕಲು ಎಸ್‍ಪಿ ಹನುಮಂತರಾಯ ನೇತೃತ್ವದ ತಂಡ ಡ್ರೋಣ್ ಕ್ಯಾಮೆರಾ ಮೂಲಕ ಹದ್ದಿನ ಕಣ್ಣಿಟ್ಟಿದೆ.
ಲಾಕ್‍ಡೌನ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮೊದಲ ಹಂತವಾಗಿ ಆಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಕ್ಯಾಮೆರಾವನ್ನು ನಗರದಲ್ಲಿ ಹಾರಿಸಲಾಯಿತು. ಆಜಾದ್ ನಗರ, ಬಾಷಾನಗರ, ವೆಂಕೊಬ ಕಾಲೊನಿ ಸೇರಿದಂತೆ ಠಾಣೆ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮೆರಾವನ್ನು ಪೊಲೀಸ್ ಪೇದೆ ಪ್ರಶಾಂತ್, ಠಾಣಾ ವ್ಯಾಪ್ತಿಯಲ್ಲಿ ಹಾರಿಸಿದರು. ಅಲ್ಲದೇ ಪೊಲೀಸ್ ವಾಹನಗಳಲ್ಲಿನ ಮೈಕ್ ಮೂಲಕ ಹೊರಗಡೆ ಬಂದರೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಲಾಯಿತು.
ಈ ಕಾಲೊನಿಗಳಲ್ಲಿ ಜನರು ಹೊರಗಡೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರು. ಇಲ್ಲಿನ ಗಲ್ಲಿಗಲ್ಲಿಗಳಲ್ಲೂ ಡ್ರೋಣ್ ಕ್ಯಾಮೆರಾದ ಮೂಲಕ ಕಣ್ಗಾವಲು ಇರಿಸಲಾಗಿದ್ದು, ಮೈದಾನ, ಗದ್ಡೆ ಸೇರಿ ಹಲವೆಡೆ ಕ್ರಿಕೆಟ್ ಆಡುವವರ, ಗುಂಪು ಸೇರುವವರ ಪತ್ತೆಗೆ ಡ್ರೋಣ್ ಕ್ಯಾಮೆರಾ ಬಳಕೆ ಮಾಡಲಾಯಿತು. ಪೊಲೀಸರ ಡ್ರೋನ್ ಕ್ಯಾಮಾರಾ ಕಂಡು ಬೈಕ್ ಸವಾರರು ಅರ್ಧ ದಾರಿಯಿಂದಲೇ ವಾಪಸಾಗುವ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗುಂಪು ಸೇರಿ ಮಾತನಾಡುವ, ಕ್ರಿಕೆಟ್ ಆಡುವ ಯುವಕರೂ ಡ್ರೋಣ್ ನನ್ನು ಕುತುಹೂಲದಿಂದ ನೋಡುತ್ತಿದ್ದರು.
ಒಟ್ಟಾರೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡುವ ಜನರನ್ನು ನಿಯಂತ್ರಿಸಲು ಡ್ರೋಣ್ ಕ್ಯಾಮೆರಾದ ಬಳಕೆ ಮಾಡಿ ಹೊಸ ಪ್ರಯೋಗವೊಂದನ್ನು ಜಿಲ್ಲಾ ಪೊಲೀಸರು ಕೈಗೊಂಡಿದ್ದು, ಈ ಪ್ರಯೋಗ ಯಶಸ್ವಿಯಾಗುತ್ತಿದೆಯೇ ಎಂದು ಕಾದು ನೋಡಬೇಕಾಗಿದೆ.
ಡ್ರೋಣ್ ಕ್ಯಾಮೆರಾ ವಿಶೇಷ:
ಈ ಡ್ರೋಣ್ ಕ್ಯಾಮೆರಾ ಅಂದಾಜು ಎರಡು ಲಕ್ಷ ರೂಪಾಯಿದ್ದಾಗಿದ್ದು, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯನ್ನು ಕವರ್ ಮಾಡುತ್ತದೆ. ಸುಮಾರು 700 ಮೀಟರ್ ಎತ್ತರಕ್ಕೆ ಹಾರುತ್ತದೆ. ಇದರೊಳಗೆ 4 ಬ್ಯಾಟರಿಗಳಿದ್ದು, ಒಂದು ಬ್ಯಾಟರಿ 2 ಗಂಟೆಗಳ ಕಾಲ ಚಾಲ್ತಿಯಲ್ಲಿರುತ್ತದೆ.