ಚೆನ್ನೈ: ಲಾಕ್‍ಡೌನ್ ಮಧ್ಯೆಯೂ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚೆನ್ನೈನ ಹಮ್ಸಾ ಪಾರ್ಕ್ ನಿವಾಸಿ ಅಯ್ಯಪ್ಪನ್ ಎಂದು ಗುರುತಿಸಲಾಗಿದೆ. ಈತ ಲಾಕ್‍ಡೌನ್ ಆಗಿರುವುದನ್ನೇ ಬಂಡವಾಳ ಮಾಡಿಕೊಂಡು ಮದ್ಯವನ್ನು ಸಂಗ್ರಹಿಸಿ ಅದನ್ನು ವಾಟ್ಸಪ್ ಮೂಲಕ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಆತನನ್ನು ಬಂಧಿಸಿದ್ದಾರೆ.
ಕೊರೊನಾ ಭಯದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಅಗತ್ಯವಸ್ತುಗಳ ಸರಬರಾಜು ಬಿಟ್ಟು ಬೇರೆಲ್ಲ ವಸ್ತುಗಳು ಮತ್ತು ಅಂಗಡಿಗಳು ಬಂದ್ ಆಗಿವೆ. ಇದರ ನಡುವೆ ಮದ್ಯದಂಗಡಿಗಳು ಕೂಡ ಮುಚ್ಚಿದ್ದು, ಮದ್ಯಪ್ರಿಯರಿಗೆ ತೊಂದರೆಯಾಗಿದೆ. ಇನ್ನೂ ಮದ್ಯಸಿಗದೆ ಕುಡುಕರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಎಣ್ಣೆಯನ್ನು ದುಬಾರಿ ಬೆಲೆಗೆ ಮಾರುತ್ತಿದ್ದಾರೆ
ಈ ರೀತಿಯಲ್ಲೇ ಅಯ್ಯಪ್ಪನ್ ಕೂಡ ಲಾಕ್‍ಡೌನ್‍ಗೂ ಮುಂಚೆಯೇ ಮದ್ಯದ ಬಾಟಲಿಗಳನ್ನು ಶೇಖರಣೆ ಮಾಡಿಕೊಂಡಿದ್ದು, ಈಗ ಅವುಗಳನ್ನು ದುಬಾರಿ ಬೆಲೆಗೆ ಮಾರುತ್ತಿದ್ದ. ಈ ವಿಚಾರ ತಿಳಿದ ಪೊಲೀಸರು ಗ್ರಾಹಕರಂತೆ ವಾಟ್ಸಪ್ ಮೂಲಕ ಮದ್ಯವನ್ನು ಆರ್ಡರ್ ಮಾಡಿದ್ದಾರೆ. ಆಗ ಅಯ್ಯಪ್ಪನ್ ಅವರಿಗೆ ತನ್ನ ಬೈಕಿನಲ್ಲಿ 12 ಬಾಟಲಿಗಳನ್ನು ತೆಗೆದುಕೊಂಡು ಕೊಡಲು ಬಂದಾಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ.