ಚಿಕ್ಕಮಗಳೂರು: ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದವರಿಂದ ದೇಶಾದ್ಯಂತ ಕೊರೊನಾ ವೈರಸ್ ಹಬ್ಬಿಸುವ ದುಷ್ಕೃತ್ಯ ನಡೆದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನ ನಗರಸಭೆಯಲ್ಲಿ ಮಾತನಾಡಿದ ಅವರು, ಜಮಾತ್ ಸಭೆಗೆ ಹೋದ ಹಲವರು ನಾಪತ್ತೆಯಾಗಿದ್ದಾರೆ. ಇದರ ಹಿಂದೆ ಕೊರೊನಾ ಜಿಹಾದಿಯ ವಾಸನೆ ಕೂಡ ಬಡಿಯುತ್ತಿದೆ. ದೇಶವನ್ನು ಕೊರೊನಾ ಮುಕ್ತ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೋರಾಡುತ್ತಿವೆ. ಯಾರು ದೆಹಲಿಗೆ ಹೋಗಿದ್ದರೋ ಅವರನ್ನ ಪತ್ತೆ ಹಚ್ಚುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ಆದರೆ ತಬ್ಲಿಘಿಗಳು ಅದಕ್ಕೆ ಸಹಕಾರ ಕೊಡುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಬೆಂಗಳೂರಿನ ಸಿದ್ದಿಕ್ ಲೇಔಟ್‍ನಲ್ಲಿ ನಡೆದ ಘಟನೆ ಎಂದು ದೂರಿದರು.
ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲಾಯಿತು. ಸಿದ್ದಿಕ್ ಲೇಔಟ್‍ನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಅವರು ಆಸ್ಪತ್ರೆ ಸೇರಿದ್ದರು. ಸೋಂಕಿತ ಮಹಿಳೆ ಬೇರೆ-ಬೇರೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಯಾರ-ಯಾರ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎನ್ನುವುದನ್ನು ಪತ್ತೆ ಹಚ್ಚಲು ಆಶಾ ಕಾರ್ಯಕರ್ತೆಯರು ಅಲ್ಲಿಗೆ ಹೋಗಿದ್ದರು. ಆದರೆ ಅಲ್ಲಿನ ಜನರು ಸೇರಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಕೆಲಸಕ್ಕೆ ಒಂದು ಸಮುದಾಯದ ಜನ ಸಹಕಾರ ಕೊಡುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಯಾರು ದೆಹಲಿ ಸಭೆಗೆ ಹೋಗಿದ್ದರೋ ಅವರು ಸ್ವಯಂ ಪ್ರೇರಿತರಾಗಿ ಬಂದು ಪೊಲೀಸರಿಗೆ ಮಾಹಿತಿ ನೀಡಿ, ಪರೀಕ್ಷೆಗೊಳಪಟ್ಟು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು. ಇಲ್ಲವಾದರೆ ಅವರಿಗೆ ಕಠಿಣ ಶಿಕ್ಷೆ, ಜೀವಾವಧಿಯಂತಹಾ ಶಿಕ್ಷೆ ಕೊಡುವಂತಾಗಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.