ಬೆಂಗಳೂರು: ದೇಶಾದ್ಯಂತ ಲಾಕ್ಡೌನ್ ಜಾರಿಯಾಗಿರುವ ಹಿನ್ನಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅದರಲ್ಲೂ ಬಡವರು, ನಿರ್ಗತಿಕರ ಸ್ಥಿತಿ ಅಯೋಮಯವಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಜನರಿಗೆ ಒದಗಿಸಲು ರಾಜ್ಯ ಸರ್ಕಾರ ಸಾಕಷ್ಟು ಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ಅಡುಗೆ ಅನೀಲ ವಿತರಿಸಲು ಮುಂದಾಗಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಬಡವರಿಗೆ 2 ತಿಂಗಳ ಪಡಿತರವನ್ನು ಮುಂಚಿತವಾಗಿ ವಿತರಣೆ ಮಾಡಲು ಆದೇಶ ನೀಡಿದೆ. ಇದೀಗ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಮೂರು ತಿಂಗಳು ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಅನಿಲ ಭಾಗ್ಯ ಯೋಜನೆಯಡಿಯಲ್ಲಿ ಬರುವವರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಮುಂದಿನ ಮೂರು ತಿಂಗಳ ಅವಧಿಗೆ ಅಡುಗೆ ಅನಿಲ ಸಿಲಿಂಡರ್ ಉಚಿತವಾಗಿ ವಿತರಿಸಲಾಗುತ್ತದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರ 27.52 ಕೋಟಿ ರೂಪಾಯಿ ಭರಿಸಲಿದೆ. ಸುಮಾರು 1 ಲಕ್ಷ ಫಲಾನುಭವಿಗಳಿಗೆ ಇದರ ನೇರ ಪ್ರಯೋಜನ ಸಿಗಲಿದೆ.