ಚಾಮರಾಜನಗರ: ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಬಂಧಿಸಲಾಗಿದೆ.
ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನಪ್ರಕಾಶ್ ಬಂಧಿತ ಬೇಟೆಗಾರರು. ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನ ಬೇರೆಡೆಗೆ ಸೆಳೆದು ಬೇಟೆಯಾಡುತ್ತಿದ್ದರು ಎನ್ನಲಾಗಿದ್ದು, ಈ ಹಿಂದೆಯೂ ಬೇಟೆಯಾಡಿ ಇವರು ಸಿಕ್ಕಿಬಿದ್ದಿದ್ದರು ಎಂದು ಡಿಎಫ್‍ಒ ಡಾ.ಎಸ್. ರಮೇಶ್ ತಿಳಿಸಿದ್ದಾರೆ.
ಬಂಧಿತರಿಂದ ನಾಡಬಂದೂಕು, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಟಿಟ್ಟುಬ ಪಕ್ಷಿ ಯನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲಾಕ್‍ಡೌನ್ ಎಫೆಕ್ಟ್‍ನಿಂದ ಕಳ್ಳ ಬೇಟೆಗಾರರ ಕರಾಮತ್ತು ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಥಂಡ ಆಗಿದೆ. ಜಿಲ್ಲೆಯಲ್ಲಿ ಈ ವರ್ಷ ಕಾವೇರಿ ವನ್ಯಜೀವಿ ಧಾಮದಲ್ಲಿ ಮಾತ್ರ ಪದೇಪದೆ ಬೆಂಕಿ ಬೀಳುತ್ತಿರುವುದು ಅರಣ್ಯ ಇಲಾಖೆಗೆ ಮತ್ತಷ್ಟು ತಲೆನೋವು ತರಿಸಿದೆ. ಎಷ್ಟು ಎಕ್ರೆ ಕಾಡು ಸುಟ್ಟಿದೆ ಎಂಬ ಮಾಹಿತಿ ನೀಡುವುದರಲ್ಲಿ ಹಾಗೂ ಜನರಿಗೆ ಜಾಗೃತಿ ಮೂಡಿಸುವಲ್ಲಿ ಕಾವೇರಿ ವನ್ಯಧಾಮದ ಅಧಿಕಾರಿ ವರ್ಗ ತಲೆ ಕೆಡಿಸಿಕೊಂಡಿದ್ದಾರೆ.