ಚಿಕ್ಕಮಗಳೂರು: ಕಳೆದ ಆರು ತಿಂಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆಂದು ತಮಿಳುನಾಡಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಬಂದಿದ್ದ 5 ಕಾರ್ಮಿಕರು ನಡೆದುಕೊಂಡೇ ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.
ಏಪ್ರಿಲ್ 14ರ ಬಳಿಕವೂ ಕೊರೊನಾ ಲಾಕ್‍ಡೌನ್ ಮುಂದುವರೆದ ಹಿನ್ನೆಲೆ ವಾಹನಗಳು ಸಿಗದ ಕಾರಣ ಐವರು ಕಾರ್ಮಿಕರು ತಮಿಳುನಾಡಿನತ್ತ ನಡೆದುಕೊಂಡೇ ಸಾಗುತ್ತಿದ್ದಾರೆ. ಸಾಗರದಿಂದ ತಮಿಳುನಾಡಿಗೆ ಸರಿಸುಮಾರು 600 ಕಿ.ಮೀ ಅಂತರವಿದೆ. ಇಲ್ಲಿ ಕೆಲಸವಿಲ್ಲ ಎಂದು ಊರು ನೆನಪಾಗಿ ನಡೆದೇ ಊರು ಸೇರಲು ಕಾರ್ಮಿಕರು ಹೊರಟಿದ್ದಾರೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಕಾರಣ ಕಳೆದೊಂದು ತಿಂಗಳಿನಿಂದ ಸಾಗರದಲ್ಲಿ ರೂಮಿನಲ್ಲೇ ಈ ಕಾರ್ಮಿಕರು ವಾಸವಿದ್ದರು. ಅವರೇ ಅಡುಗೆ ತಯಾರಿಸಿಕೊಂಡು ಊಟ-ತಿಂಡಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು.
ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಕೆಲಸ ಆರಂಭವಾಗುತ್ತೆ ಅಥವಾ ಊರಿಗೆ ಹೋಗೋಣವೆಂದು ಭಾವಿಸಿ ಸಾಗರದಲ್ಲೇ ಕಾರ್ಮಿಕರು ಇದ್ದರು. ಆದರೆ ಲಾಕ್‍ಡೌನ್ ಮುಂದುವರೆದ ಕಾರಣ ಮತ್ತೆ ಆತಂಕಕ್ಕೀಡಾಗಿ ತಮಿಳುನಾಡಿನತ್ತ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಹೀಗೆ ನಡೆದು ಬಂದ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಠಾಣಾ ವ್ಯಾಪ್ತಿಯ ಲಕ್ಕವಳ್ಳಿ ಕ್ರಾಸ್ ಬಳಿ ಬರ್ತಿದ್ದಂತೆ ದಣಿವಾರಿಸಿಕೊಳ್ಳಲು ಕೂತಿದ್ದರು. ಲಕ್ಕವಳ್ಳಿ ಕ್ರಾಸ್ ಬಳಿಯ ಚೆಕ್‍ಪೋಸ್ಟ್‍ನಲ್ಲಿದ್ದ ಪೊಲೀಸರು ಇವರನ್ನು ವಿಚಾರಿಸಿದಾಗ ಪೊಲೀಸರ ಬಳಿ ಕಾರ್ಮಿಕರು ತಮ್ಮ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.
ಕಾರ್ಮಿಕರ ಕಷ್ಟ ಆಲಿಸಿದ ಪೊಲೀಸರು ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿ ಎರಡು ದಿನಕ್ಕೆ ಆಗುವಷ್ಟು ನೀರು, ಬಿಸ್ಕೆಟ್ ಹಾಗೂ ಬ್ರೆಡ್ ಕೊಟ್ಟು ಕಳುಹಿಸಿದ್ದಾರೆ. ನಡೆದುಕೊಂಡು ಹೋಗುತ್ತಿರುವ ಕಾರಣ ತಾವು ತಂದಿದ್ದ ಆಹಾರವನ್ನ ಮುಂದೆ ಹಸಿವಾದಾಗ ತಿನ್ನಲು ಇಟ್ಟುಕೊಂಡು ಪೊಲೀಸರು ಕೊಟ್ಟ ಊಟ ಮಾಡಿ ಮತ್ತೆ ಐವರು ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.