ಬೆಂಗಳೂರು: ಜನಪ್ರಿಯ ಹಾಸನ್ಯ ನಟ ಬುಲೆಟ್ ಪ್ರಕಾಶ್(44) ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಕೆಲ ದಿನಗಳಿಂದ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವೆಂಟಿಲೇಟರಿನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದೊಂದು ತಿಂಗಳಿನಿಂದ ಬುಲೆಟ್ ಪ್ರಕಾಶ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಒಂದು ತಿಂಗಳ ಹಿಂದೆ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಪ್ರಕಾಶ್ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿಂದ ಅಸ್ಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಏ.4 ರಂದು ಕನ್ನಿಂಗ್‍ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕಿಡ್ನಿ ವೈಫಲ್ಯದ ಜೊತೆಗೆ ಕಾಲಿಗೆ ಗ್ಯಾಂಗ್ರಿನ್ ಕೂಡ ಆಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಕಾರಣ ವೆಂಟಿಲೇಟರ್‍ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಬುಲೆಟ್ ಪ್ರಕಾಶ್ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಹೀಗಾಗಿ ಶಸ್ತ್ರ ಚಿಕಿತ್ಸೆಯೇ ಅವರ ಜೀವಕ್ಕೆ ಮುಳ್ಳಾಯಿತೇ ಎಂಬ ಪ್ರಶ್ನೆ ಎದ್ದಿತ್ತು. ಅಲ್ಲದೆ ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ಅವಕಾಶ ಕಡಿಮೆಯಾಗಿತ್ತು. ಹೀಗಾಗಿ ಹಾಸ್ಯನಟ ಮಾನಸಿಕವಾಗಿ ಬಹಳ ನೊಂದಿದ್ದ ವಿಚಾರ ಆಪ್ತ ಮೂಲಗಳಿಂದ ತಿಳಿದು ಬಂದಿತ್ತು.
ಬುಲೆಟ್ ಪ್ರಕಾಶ್ ಒಟ್ಟು 300ಕ್ಕೂ ಹೆಚ್ಚು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ರಾಯಲ್ ಎನ್‍ಫೀಲ್ಡ್ ಬೈಕಿನಿಂದಾಗಿ ‘ಬುಲೆಟ್’ ಹೆಸರು ಬಂದಿತ್ತು. 2015ರಲ್ಲಿ ಬಿಜೆಪಿ ಪಕ್ಷವನ್ನು ಬುಲೆಟ್ ಪ್ರಕಾಶ್ ಸೇರಿದ್ದರು.