ಮೈಸೂರು: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯಾಗೆ ಹಿಂದೆ ನಕ್ಸಲ್ ಜೊತೆ ಸಂಬಂಧ ಇದ್ದಿದ್ದು ಸಾಬೀತಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ, ಮಗಳ ಕೈ-ಕಾಲು ಮುರಿಯಿರಿ. ಅವಳಿಗೆ ಜಾಮೀನು ಸಿಗಬಾರದು. ಮಗಳ ರಕ್ಷಣೆಗೆ ನಾವು ಹೋಗುವುದಿಲ್ಲ ಅಂತ ಅಮೂಲ್ಯಾ ತಂದೆ ಹೇಳಿದ್ದಾರೆ. ಬಹಳ ಮುಖ್ಯವಾಗಿ ಇದರ ಹಿಂದೆ ಇರುವ ಸಂಘಟನೆ ಯಾವುದು? ಯಾರು ಈ ರೀತಿ ಮನೋಭಾವ ಬೆಳೆಸುತ್ತಿದ್ದಾರೆ ಎನ್ನುವುದನ್ನು ತಿಳಿಯಬೇಕಿದೆ. ಜೊತೆಗೆ ಅವರ ಮೇಲೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಇದು ಇಲ್ಲಿಗೆ ಕೊನೆಯಾಗುವುದಿಲ್ಲ ಎಂದರು.
ಶಾಂತಿ ಸುವ್ಯವಸ್ಥೆ ಹಾಳು ಮಾಡಲು ಷಡ್ಯಂತ್ರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಮುಂದಿನ ದಿನಗಳಲ್ಲಿ ಇದರ ಹಿಂದೆ ಯಾವ ಸಂಘಟನೆ ಇದೆ ಎಂದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆಯಿಂದ ಅಮೂಲ್ಯಾಳಿಗೆ ಯಾರು ಪ್ರೇರಣೆ ಕೊಡುತ್ತಿದ್ದಾರೆ ಎನ್ನುವುದು ಗೊತ್ತಾಗಲಿದೆ ಎಂದು ತಿಳಿಸಿದರು