ಬೀದರ್: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಡೆಯಲು 21 ದಿನಗಳ ಕಾಲ ಲಾಕ್‍ಡೌನ್ ಆಗಿದೆ. ಇದೀಗ ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗೆ ಬಂದು ಓಡಾಡುತ್ತಿದ್ದವರ ಸುಮಾರು 213 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಸೋಂಕು ಇತರರಿಗೆ ಹರಡದಂತೆ ತಡೆಯಲು ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ. ಆದರೆ ಕಲಂ 144 ಸಿಆರ್‌ಪಿಸಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಜಿಲ್ಲೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ.
ಕೊರೊನಾ ವೈರಸ್ ಹರಡದಂತೆ ತಡೆಯಲು ಸಾರ್ವಜನಿಕರು ಮನೆಯಲ್ಲಿಯೇ ಇರಬೇಕು. ಅವಶ್ಯಕ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಸುಮ್ಮನೇ ಅನಾವಶ್ಯಕವಾಗಿ ಹೊರಗೆ ಬಂದು ಓಡಾಡಬಾರದು ಎಂದು ಪೊಲೀಸರು ಆದೇಶ ನೀಡಿದ್ದರು. ಹೀಗಾಗಿ ಅನಾವಶ್ಯಕವಾಗಿ ಓಡಾಡಿದವರ 213 ವಾಹನಗಳನ್ನು ಜಪ್ತಿ ಮಾಡಿ ಕಾನೂನು ಪ್ರಕ್ರಿಯೆ ಜರುಗಿಸಲಾಗಿದೆ.
ಸಾರ್ವಜನಿಕರು ಲಾಕ್‍ಡೌನ್ ಆದೇಶವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ಎಲ್.ನಾಗೇಶ್ ತಿಳಿಸಿದ್ದಾರೆ.