Home / ಜಿಲ್ಲೆ / ಬೆಳಗಾವಿಯ ರಾಜಹಂಸಘಡ ಕಾರ್ಯಕ್ರಮ ವಿವಾದ: ತಗ್ಗಿ,ಬಗ್ಗಿ ನಡೆಯೆಂದರೆ ನಡೆದೇವು,ತೆವಳಿಕೊಂಡು ಹೋಗೆಂದರೆ ಸೆಟೆದು ನಿಲ್ಲಬೇಕಾಗುತ್ತದೆ! ಅಶೋಕ ಚಂದರಗಿ

ಬೆಳಗಾವಿಯ ರಾಜಹಂಸಘಡ ಕಾರ್ಯಕ್ರಮ ವಿವಾದ: ತಗ್ಗಿ,ಬಗ್ಗಿ ನಡೆಯೆಂದರೆ ನಡೆದೇವು,ತೆವಳಿಕೊಂಡು ಹೋಗೆಂದರೆ ಸೆಟೆದು ನಿಲ್ಲಬೇಕಾಗುತ್ತದೆ! ಅಶೋಕ ಚಂದರಗಿ

Spread the love

ಬೆಳಗಾವಿಯ ರಾಜಹಂಸಘಡ
ಕಾರ್ಯಕ್ರಮ ವಿವಾದ: ತಗ್ಗಿ,ಬಗ್ಗಿ
ನಡೆಯೆಂದರೆ ನಡೆದೇವು,ತೆವಳಿಕೊಂಡು
ಹೋಗೆಂದರೆ ಸೆಟೆದು ನಿಲ್ಲಬೇಕಾಗುತ್ತದೆ!
ಕರ್ನಾಟಕ ಸರಕಾರದ,ಕನ್ನಡಿಗರಿಗಾದ
ಅವಮಾನವನ್ನು ಸರಿಪಡಿಸುವ ಹೊಣೆ
ಬೆಳಗಾವಿ ಡಿಸಿ ಯವರ ಮೇಲಿದೆ

ಬೆಳಗಾವಿ ಸಮೀಪದ ಯಳ್ಳೂರು ಗ್ರಾಮದಲ್ಲಿಯ ಐತಿಹಾಸಿಕ ರಾಜಹಂಸಘಡ ಕೋಟೆಯ ಮೇಲೆ ಬಹು ಎತ್ತರದ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುವ ಮತ್ತು ಕೋಟೆಯ ಸುಧಾರಣೆಯ ಯೋಜನೆಗಾಗಿ ಕರ್ನಾಟಕ ಸರಕಾರ ಮೂರುವರೆ ಕೋಟಿ ರೂ.ಒದಗಿಸಿದೆ.ಇದರ ಭೂಮಿ ಪೂಜೆಯ ಕಾರ್ಯಕ್ರಮವು ಸೋಮವಾರ ನಡೆದಿದ್ದು ಅದು ಸಂಪೂರ್ಣವಾಗಿ ಮರಾಠಿಯಲ್ಲೇ ಇತ್ತು.ಕಾರ್ಯಕ್ರಮದ ಹಿಂದೆ ಹಾಕಿದ್ದ ಫಲಕದಲ್ಲಿ ಔಷಧಕ್ಕೂ ಕನ್ನಡ ಇರಲಿಲ್ಲ.
” ಬೆಳಗಾವಿ” ಎಂದಿರಬೇಕಾದಲ್ಲಿ ” ಬೆಳಗಾಂವ” ಎಂದೇ ಮರಾಠಿಯಲ್ಲಿ ಬರೆಸಲಾಗಿತ್ತು.ಇದೆಲ್ಲ ವಿವಾದವಾಗಿ ಕನ್ನಡ ಸಂಘಟನೆಗಳು ಪ್ರತಿಭಟನೆ ಮಾಡಿವೆ.ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಕಟುಟೀಕೆಗಳು ಹರಿದಾಡಿವೆ.
ಬೆಳಗಾವಿ ಗಡಿಭಾಗದಲ್ಲಿ ಸಂಸದರು,ಶಾಸಕರು ಮರಾಠಿಗರನ್ನು ಮೆಚ್ಚಿಸಲು ಮರಾಠಿಯಲ್ಲಿ ಭಾಷಣ ಮಾಡುವದು ಹೊಸದೇನಲ್ಲ.ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ,ಉತ್ತರ ಶಾಸಕ ಅನಿಲ ಬೆನಕೆ,ಹಿಂದಿನ ಶಾಸಕ ಫಿರೋಜ್ ಸೇಠ,ರೈಲು ಸಚಿವ ಸುರೇಶ ಅಂಗಡಿ ಕನ್ನಡದಲ್ಲಿ ಆರಂಭಿಸಿ ಮರಾಠಿಯಲ್ಲಿ ಭಾಷಣವನ್ನು ಅಂತ್ಯಗೊಳಿಸುತ್ತಾರೆ.ಆದರೆ ಕರ್ನಾಟಕ ಸರಕಾರದ ಅಧಿಕೃತ ಸಮಾರಂಭಗಳಲ್ಲಿ ಅಧಿಕಾರಿಗಳು ಶಿಲಾಕೋನ,ಫ್ಲೆಕ್ಸ ಬ್ಯಾನರ್ ಗಳಲ್ಲಿ ,ಕರ್ನಾಟಕ ಸರಕಾರದ ಭಾಷಾ ನೀತಿಯ ಪ್ರಕಾರ,ಕನ್ನಡವನ್ನೇ ಬಳಸಿದ್ದಾರೆ.ಇದು ನಿಯಮವೂ ಕೂಡ.ಆದರೆ ರಾಜಹಂಸಘಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮರಾಠಿಯಲ್ಲಿಯೇ ಮನಸಿಚ್ಛೆಯಂತೆ ನಡೆದುಕೊಳ್ಳಲಾಗಿದ್ದು ಸ್ಪಷ್ಟವಾಗಿದೆ.ಈ ವರ್ತನೆ ಕನ್ನಡಿಗರನ್ನು ಕೆರಳಿಸಿದ್ದರೆ ಸಹಜ ಪ್ರತಿಕ್ರಿಯೆಯಾಗಿದೆ.
ಬೆಳಗಾವಿ,ಖಾನಾಪುರಗಳ ಮರಾಠಿಗರು ಕ್ರಮೇಣ ಮುಖ್ಯ ವಾಹಿನಿಯಲ್ಲಿ ಸೇರತೊಡಗಿದ್ದಾರೆ.ಅಭಿವೃದ್ಧಿಯ ರುಚಿ ಅವರಿಗೂ ಹತ್ತತೊಡಗಿದೆ.ಮಹಾರಾಷ್ಟ್ರ ಪರವಾಗಿರುವ ಸಂಘಟನೆಗಳಿಂದ ವಿಮುಖವಾಗುತ್ತಿರುವ ಅವರು ರಾಜಕೀಯ ಪಕ್ಷಗಳತ್ತ ವಾಲಿದ್ದಾರೆ.ಎಮ್ ಇ ಎಸ್ ನಾಯಕರು ಎಷ್ಟೇ ಹಾರಾಡಿದರೂ ಅವರಿಗೆ ಮರಾಠಿಗರು ಸೊಪ್ಪು ಹಾಕುತ್ತಿಲ್ಲ.ಮುಂದೆ ಹಾಕುವದೂ ಇಲ್ಲ.ಅವರಿಗೆ ಅಭಿವೃದ್ಧಿ ಬೇಕಾಗಿದೆ.ಅದನ್ನು ಕೊಡಲು ಯಾರ ತಕರಾರೂ ಇಲ್ಲ.ಆದರೆ ಅವರು ಕೇಳದೇ ಇದ್ದುದನ್ನು,ನಿರೀಕ್ಷೆ ಮಾಡದೇ ಇದ್ದುದನ್ನು ಕೊಡಲು ಹೋದರೆ ಕರ್ನಾಟಕ ಸರಕಾರದ,ಗಡಿಭಾಗದ ಕನ್ನಡಿಗರನ್ನು ಅವಮಾನ ಮಾಡಿದಂತೆಯೇ ಸರಿ.
ರಾಜಹಂಸಘಡದಲ್ಲಿ ಕನ್ನಡದಲ್ಲಿ ನಾಮಫಲಕ ಬರೆಸಿ ಕಾರ್ಯಕ್ರಮ ನಡೆಸಿದ್ದರೆ ಒಬ್ಬನೇ ಒಬ್ಬ ಮರಾಠಿಗರೂ ತಕರಾರು ಎತ್ತುತ್ತಿರಲಿಲ್ಲ.ಅವರಿಗೆ ಆ ಕೋಟೆಯ ಸುಧಾರಣೆ ಬೇಕು.ಅಲ್ಲಿಗೆ ಹೋಗಲು ಒಳ್ಳೆಯ ರಸ್ತೆ ,ವಿದ್ಯುತ್ ದೀಪದ ವ್ಯವಸ್ಥೆ ಬೇಕು.ಆದರೆ ಕಾರ್ಯಕ್ರಮ ನಡೆಸಿದವರು ಆ ಮರಾಠಿಗರ ತಲೆಯಲ್ಲಿ ತಾವೇ ಮುಂದಾಗಿ ಭಾಷೆಯ ಹುಳ ತುರುಕಿದ್ದಾರೆ.
ಈ ಕಾರ್ಯಕ್ರಮವು ಅಧಿಕೃತ ಅಲ್ಲ..ತಮಗೆ ಈ ಬಗ್ಗೆ ಯಾವದೇ ಮಾಹಿತಿ ನೀಡದೇ ಬೆಳಗಾವಿ ಗ್ರಾಮೀಣ ಶಾಸಕರು ಕಾರ್ಯಕ್ರಮ ನಡೆಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ವಿದ್ಯಾವತಿ ಭಜಂತ್ರಿ ಹೇಳುತ್ತಾರೆ.ಹಾಗಾದರೆ ರಾಜ್ಯ ಸರಕಾರದ ಅನುದಾನವನ್ನು ಪಡೆದ ಕಾರ್ಯಕ್ರಮವನ್ನು ಯಾರು ಬೇಕಾದರೂ ಮಾಡಬಹುದೆ? ಅಲ್ಲಿಯ ಕಾರ್ಯಕ್ರಮದ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗಳೇ ಸ್ಪಷ್ಟಪಡಿಸಬೇಕು.ಆ ಕೋಟೆಯ ಸುಧಾರಣೆಯ ಯೋಜನೆಯು ಕರ್ನಾಟಕ ಸರಕಾರದ ಅನುದಾನದಲ್ಲಿ ನಡೆದಿರುವ ಬಗ್ಗೆ ಕನ್ನಡದಲ್ಲಿ ಫಲಕವೊಂದನ್ನು ಅಲ್ಲಿ ನೆಡಬೇಕು.
ಬೆಳಗಾವಿ ಜಿಲ್ಲಾಡಳಿತವು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.ಇಲ್ಲವಾದರೆ ಕನ್ನಡಪರ ಸಂಘಟನೆಗಳು,ಕರ್ನಾಟಕ ಸರಕಾರದ ಮಾನ ಮರ್ಯಾದೆ ಕಾಪಾಡಲು,ಇಂಥ ಫಲಕವೊಂದನ್ನು ಅಲ್ಲಿ ನೆಡಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ.
ಈ ವಿವಾದವನ್ನು ಜಿಲ್ಲಾಧಿಕಾರಿಗಳು ಬಗೆಹರಿಸಬೇಕು,ಮುಂದೆ ಹೀಗಾಗದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಬೇಕು.
ಅಶೋಕ ಚಂದರಗಿ,ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ
ಕ್ರಿಯಾ ಸಮಿತಿ ಮೊ; 9620114466


Spread the love

About Laxminews 24x7

Check Also

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

Spread the loveಸವದತ್ತಿ: ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.   …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ