ಲಾಕ್‌ಡೌನ್ ವಿಸ್ತರಣೆಯಾಗಿರುವುದು ಕೊರೊನಾ ವೈರಸ್ ನಿಯಂತ್ರಣ ಮಾಡುವ ಹಾದಿಯಲ್ಲಿ ಒಳ್ಳೆಯ ನಿರ್ಧಾರವಾದರೂ, ವಲಸೆ ಕಾರ್ಮಿಕರ ಪಾಲಿಗೆ ಉಸಿರುಗಟ್ಟಿದ ಪರಿಸ್ಥಿತಿಯನ್ನು ಹುಟ್ಟು ಹಾಕಿದೆ. ಬುಧವಾರ ಮಧ್ಯಾಹ್ನ ರಾಜಧಾನಿ ಹೊಸದಿಲ್ಲಿಯಲ್ಲಿ ಕಂಡುಬಂದ ಮನಕುಲಕುವ ದೃಶ್ಯವೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದು.
ರಾಜಧಾನಿಯ ಪ್ರಮುಖ ಶವಾಗಾರಗಳಲ್ಲಿ ಒಂದಾದ ನಿಗಂಬೋಧ್ ಘಾಟ್ ಬಳಿ ಸತ್ತವರ ಆಚರಣೆಗಳಿಗಾಗಿ ಸಂಗ್ರಹಿಸಲಾಗಿದ್ದ ಬಾಳೆ ಹಣ್ಣುಗಳನ್ನು ಯಮುನಾ ನದಿ ದಡದಲ್ಲಿ ಎಸೆಯಲಾಗಿತ್ತು. ಇದನ್ನು ಕಂಡ ವಲಸೆ ಕಾರ್ಮಿಕರು, ಹಸಿವು ತಾಳಲಾರದೆ ಬಾಳೆ ಹಣ್ಣು ರಾಶಿ ಬಳಿ ತೆರಳಿ ಒಳ್ಳೆಯ ಹಣ್ಣಗಳನ್ನು ಅದೇ ಸ್ಥಳದಲ್ಲಿಯೇ ತಿನ್ನುತ್ತಿದ್ದ ದೃಶ್ಯ ಕಂಡುಬಂದಿದೆ.
“ಇದು ಬಾಳೆಹಣ್ಣು … ಸಾಮಾನ್ಯವಾಗಿ ಇವುಗಳು ಸುಲಭವಾಗಿ ಕೆಡುವುದಿಲ್ಲ. ನಾವು ಚೆನ್ನಾಗಿರುವ ಹಣ್ಣಗಳನ್ನು ಆರಿಸಿದರೆ ಅವು ಸ್ವಲ್ಪ ಕಾಲ ನಮಗೆ ಉಳಿಯುತ್ತವೆ” ಎಂದು ಚೀಲಕ್ಕೆ ಬಾಳೆಹಣ್ಣು ತುಂಬಿಸುತ್ತಿದ್ದ ವ್ಯಕ್ತಿಯೊಬ್ಬ ಸುದ್ದಿಗಾರರೊಬ್ಬರಿಗೆ ಪ್ರತಿಕ್ರಿಯಿಸಿದ್ದಾರೆ.
“ನಮಗೆ ನಿಯಮಿತವಾಗಿ ಆಹಾರ ಸಿಗುತ್ತಿಲ್ಲ. ಆದ್ದರಿಂದ ಇವುಗಳನ್ನು ಪಡೆದುಕೊಳ್ಳುವುದು ಒಳ್ಳೆಯದು ಅನಿಸಿತು,” ಎಂದು ಉತ್ತರ ಪ್ರದೇಶದ ಅಲಿಗರ್‌ನ ವಲಸೆ ಕಾರ್ಮಿಕನೊಬ್ಬ ತಿಳಿಸಿದ್ದಾನೆ. ಇದು ಸಾಮಾನ್ಯ ದೃಶ್ವವಾಗಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ವಲಸೆ ಕಾರ್ಮಿಕರು ಇಲ್ಲೇ ತೆರೆದ ಪ್ರದೇಶದಲ್ಲಿ ಮಲಗುತ್ತಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸಲು ಹಠಾತ್ತನೆ ರಾಷ್ಟ್ರವ್ಯಾಪಿ ಎರಡನೇ ಲಾಕ್‌ಡೌನ್ ವಿಧಿಸಲಾಯಿತು. ಇದರಿಂದ ಸಿಕ್ಕಿಬಿದ್ದ ದೆಹಲಿಯ ಸಾವಿರಾರು ವಲಸಿಗರ ತಂಡವೊಂದು ಉತ್ತರ ದೆಹಲಿಯ ಯಮುನಾ ನದಿ ದಡದಲ್ಲಿ ನೆಲೆಸಿದೆ. ದೇಶಾದ್ಯಂತ ಎಲ್ಲಾ ವಲಸಿಗರಂತೆ ಇವರು, ಉದ್ಯೋಗ ಕಳೆದುಕೊಂಡರು. ಸಾರ್ವಜನಿಕ ಸಾರಿಗೆಯನ್ನು ನಿಲ್ಲಿಸಿದ್ದರಿಂದ ಅವರು ಮನೆಗೆ ಹೋಗಲು ಸಾಧ್ಯವಾಗದೆ, ಆಹಾರ ಮತ್ತು ಆಶ್ರಯವಿಲ್ಲದೆ ಉಳಿದಿದ್ದಾರೆ.
