ಬಳ್ಳಾರಿ: ಲಾಕ್‍ಡೌನ್ ಆಗಿದ್ದನ್ನೇ ಬಂಡವಾಳ ಮಡಿಕೊಂಡು ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಯರ್ರಂಗಳಿಯ ಹೊರವಲಯದ ಒಂದೂವರೆ ಎಕ್ರೆಯಲ್ಲಿ ಬೆಳೆದ ಈರುಳ್ಳಿಯನ್ನೇ ರಾತ್ರೋರಾತ್ರಿ ಕಟಾವು ಮಾಡಿಕೊಂಡು ಕದ್ದೊಯ್ದ ಘಟನೆಯೊಂದು ಬೆಳಕಿಗೆ ಬಂದಿದೆ.
ಯರ್ರಂಗಳಿ ಗ್ರಾಮದ ರೈತ ಸುನೀಲ್ ಕುಮಾರ್ ಅವರಿಗೆ ಈ ಹೊಲ ಸೇರಿದ್ದು, ಶನಿವಾರ ಹೊಲಕ್ಕೆ ಹೋಗಿ ಈರುಳ್ಳಿ ಬೆಳೆಯನ್ನು ವೀಕ್ಷಣೆ ಮಾಡಿದ್ದರು. ಭಾನುವಾರ ರಾತ್ರಿಯೊಳಗೆ ಈ ಬೆಳೆಯನ್ನು ಯಾರೋ ದುಷ್ಕರ್ಮಿಗಳು ಬಂದು ಕಟಾವು ಮಾಡಿಕೊಂಡು ಹೋಗಿದ್ದಾರೆ.
ಈ ಮೊದಲು ಹೊಲದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿತ್ತು. ಆದರೆ ವಿಪರೀತ ಮಳೆ ಸುರಿದ ಕಾರಣ ಮೆಣಸಿನಕಾಯಿ ಬೆಳೆ ಸಂಪೂರ್ಣ ಹಾಳಾಗಿ ಹೋಗಿತ್ತು. ಹೀಗಾಗಿ ಅದನ್ನು ನಾಶಪಡಿಸಿ ಈರುಳ್ಳಿ ಬೆಳೆಯನ್ನು ಬೆಳೆದಿದ್ದೆ. ಆದರೆ ಕಟಾವು ಹಂತಕ್ಕೆ ಬಂದಿದ್ದ ಈರುಳ್ಳಿ ಬೆಳೆಯನ್ನು ಇನ್ನೇನು ಸೋಮವಾರ ಕಟಾವು ಮಾಡಬೇಕಿತ್ತು. ಈ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಸಿಗದ ಕಾರಣ ಕಟಾವಿಗೆ ವಿಳಂಬವಾಗಿತ್ತು. ಆದರೆ ರಾತ್ರೋ ರಾತ್ರಿ ಈರುಳ್ಳಿ ಬೆಳೆಯನ್ನೇ ಕದ್ದಿದ್ದಾರೆ ಎಂದು ರೈತ ಸುನೀಲ್ ಕುಮಾರ್ ದೂರಿದ್ದಾರೆ.
ಹೊಲದಲ್ಲಿ ಬೆಳೆದ ಬೆಳೆಯನ್ನೇ ಕದಿಯುವ ಖದೀಮರು ಹುಟ್ಟಿಕೊಂಡರೇ ಮುಂದೆ ನಾವು ಭೂಮಿ ತಾಯಿಯನ್ನು ನೆಚ್ಚಿಕೊಂಡು ಕೆಲಸ ಮಾಡುವುದು ಹೇಗೆ. ಸಾಲಸೂಲ ಮಾಡಿ ಈ ಬೆಳೆಯನ್ನ ಬೆಳೆಯಲಾಗಿತ್ತು. ಉತ್ತಮ ಇಳುವರಿಯೂ ಬಂದಿತ್ತು. ಆದರೆ ಈ ಬೆಳೆ ನಮ್ಮ ಕೈಗೆ ಸಿಗದೆ ಕಳ್ಳರ ಪಾಲಾಗಿದೆ. ಅತ್ತ ಸಾಲ ಮಾಡಿದ ಹಣ ತೀರಿಸದೇ ಇತ್ತ ಬೆಳೆಯೂ ಸಿಗದೆ ಕಂಗಾಲಾಗಿದ್ದೇನೆ ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ.