Breaking News

ಭಾರತಕ್ಕೆ ಮತ್ತೆ ಟ್ರಂಪ್‌ ಶಾಕ್‌ – 25% ಸುಂಕ ವಿಧಿಸಲು ಮುಂದಾದ ಅಮೆರಿಕ

Spread the love

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತೆ ಭಾರತಕ್ಕೆ ತೆರಿಗೆ ಶಾಕ್‌ ವಿಧಿಸಿದ್ದಾರೆ. ವ್ಯಾಪಾರ ತನಿಖೆಗಳು ಮುಕ್ತಾಯಗೊಂಡ ಬೆನ್ನಲ್ಲೇ, ಅಮೆರಿಕದ 14 ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೊಸ ಆಮದು ಸುಂಕಗಳನ್ನು  ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಪ್ರಸ್ತಾಪಿಸಿದೆ. ಈ ಪಟ್ಟಿಯಲ್ಲಿ ಭಾರತವೂ ಸೇರಿದ್ದು, ಭಾರತೀಯ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆಯನ್ನು ಮುಂದಿಡಲಾಗಿದೆ.

ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸುತ್ತಿರುವ  ಆರೋಪದ ಮೇಲೆ ಅಮೆರಿಕದ ಟ್ರಂಪ್ ಆಡಳಿತವು ಭಾರತ ಸೇರಿದಂತೆ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ಹೆಚ್ಚುವರಿ ಸುಂಕ  ವಿಧಿಸಲು ಮುಂದಾಗಿದೆ. ಈ ಹೊಸ ಪ್ರಸ್ತಾವನೆಯ ಅಡಿಯಲ್ಲಿ ಭಾರತವು ಶೇ. 25ರವರೆಗೆ ಹೆಚ್ಚುವರಿ ಅಮೆರಿಕನ್ ಸುಂಕವನ್ನು ಎದುರಿಸಬೇಕಾಗಬಹುದು ಎಂದು ರಾಯಿಟರ್ಸ್  ವರದಿ ಮಾಡಿದೆ.

ಭಾರತದೊಂದಿಗೆ ಕಾಂಬೋಡಿಯಾ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಮತ್ತು ಥೈಲ್ಯಾಂಡ್ ಸೇರಿದಂತೆ ಇತರ ಆರು ಆರ್ಥಿಕತೆಗಳ ಮೇಲೂ ಇದೇ ರೀತಿಯ ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದೆ.

ಜಾರಿ ಯಾವಾಗ?
ಪ್ರಸ್ತಾವಿತ ಸುಂಕಗಳು ತಕ್ಷಣವೇ ಜಾರಿಗೆ ಬರುವುದಿಲ್ಲ. ಅವು ಅನುಷ್ಠಾನಗೊಳ್ಳುವ ಮೊದಲು ಸಾರ್ವಜನಿಕ ಸಮಾಲೋಚನಾ ಪ್ರಕ್ರಿಯೆಗೆ ಒಳಪಡಲಿವೆ. ಅಲ್ಲದೆ, ಈ ಪ್ರಸ್ತಾವನೆಗಳನ್ನು ಸಿದ್ಧಪಡಿಸುವಾಗ ಅಸ್ತಿತ್ವದಲ್ಲಿರುವ ವ್ಯಾಪಾರ ಒಪ್ಪಂದಗಳನ್ನು ಸಹ ಆಡಳಿತವು ಪರಿಗಣಿಸಿದೆ ಎಂದು ಅಮೆರಿಕದ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ವ್ಯಾಪಾರ ತನಿಖೆಗಳ ವರದಿಯ ಆಧಾರದ ಮೇಲೆ ಈ ಸುಂಕದ ದರಗಳನ್ನು ನಿಗದಿಪಡಿಸಲು ಪ್ರಸ್ತಾಪಿಸಲಾಗಿದ್ದು, ಇದು ಜಾರಿಯಾದಲ್ಲಿ ಭಾರತ ಸೇರಿದಂತೆ ಏಷ್ಯಾ ಮತ್ತು ಯುರೋಪ್‌ನ ಪ್ರಮುಖ ಆರ್ಥಿಕತೆಗಳ ರಫ್ತು ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಸುಂಕ ವಿಧಿಸಲು ಕಾರಣವೇನು?
ಅಮೆರಿಕವು ಭಾರತ, ಚೀನಾ, ಯುರೋಪಿಯನ್ ಯೂನಿಯನ್ ಮತ್ತು ಜಪಾನ್ ಸೇರಿದಂತೆ 14 ಪ್ರಮುಖ ಆರ್ಥಿಕತೆಗಳ ವ್ಯಾಪಾರ ನೀತಿಗಳ ಕುರಿತು ಹಲವು ತಿಂಗಳುಗಳಿಂದ ತನಿಖೆ ನಡೆಸಿತ್ತು. ಈ ದೇಶಗಳು ಮಾರುಕಟ್ಟೆಯ ಬೇಡಿಕೆಗಿಂತ ಹೆಚ್ಚಿನ ಕೈಗಾರಿಕಾ ಸಾಮರ್ಥ್ಯ ಮತ್ತು ಉತ್ಪಾದನೆಯನ್ನು ಉತ್ತೇಜಿಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಹಲವು ದೇಶಗಳ ಮೇಲೆ ಶೇ. 20ರವರೆಗೆ ಸುಂಕ ವಿಧಿಸಲು ಉದ್ದೇಶಿಸಲಾಗಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಂಕದ ಮೂಲಕ ಜಾಗತಿಕ ವ್ಯಾಪಾರ ಸಂಬಂಧಗಳನ್ನು ಮರುರೂಪಿಸುವುದು ಹಾಗೂ ವ್ಯಾಪಾರ ಪಾಲುದಾರ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕನ್ ಸರಕುಗಳನ್ನು ಖರೀದಿಸುವಂತೆ ಅಥವಾ ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕಕ್ಕೆ ಸ್ಥಳಾಂತರಿಸುವಂತೆ ಒತ್ತಡ ಹೇರುವುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಡೆಯ ಹಿಂದಿನ ಉದ್ದೇಶವಾಗಿದೆ.

ಭಾರತವನ್ನು ಹೊರತುಪಡಿಸಿ, ಅಮೆರಿಕದ ವ್ಯಾಪಾರ ತನಿಖೆಗೆ ಒಳಪಟ್ಟ ಇತರ ರಾಷ್ಟ್ರಗಳ ಪಟ್ಟಿಯಲ್ಲಿ ಬಾಂಗ್ಲಾದೇಶ, ಕಾಂಬೋಡಿಯಾ, ಚೀನಾ, ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಮಲೇಷ್ಯಾ, ಸಿಂಗಾಪುರ, ಸ್ವಿಟ್ಜರ್ಲೆಂಡ್, ತೈವಾನ್, ಥೈಲ್ಯಾಂಡ್, ವಿಯೆಟ್ನಾಂ ಮತ್ತು ಯುರೋಪಿಯನ್ ಯೂನಿಯನ್ ಸೇರಿವೆ. ಈ ಪೈಕಿ ಚೀನಾದ ಮೇಲೆ ಶೇ. 20ರಷ್ಟು ಸುಂಕ ವಿಧಿಸಲು ಪ್ರಸ್ತಾಪಿಸಲಾಗಿದ್ದು, ಇದು ಘೋಷಿಸಲಾದ ಅತಿ ಹೆಚ್ಚಿನ ದರಗಳಲ್ಲಿ ಒಂದಾಗಿದೆ.

ಯಾವ ದೇಶಗಳಿಗೆ ಎಷ್ಟು ಸುಂಕ?
ಚೀನಾ: ಶೇ. 20 (ಇದು ಶೇ. 40ರವರೆಗೂ ಏರಿಕೆಯಾಗುವ ಸಾಧ್ಯತೆಯಿದೆ)
* ವಿಯೆಟ್ನಾಂ: ಗರಿಷ್ಠ ಶೇ. 35
* ಭಾರತ: ಗರಿಷ್ಠ ಶೇ. 25
* ತೈವಾನ್: ಗರಿಷ್ಠ ಶೇ. 25
* ದಕ್ಷಿಣ ಕೊರಿಯಾ: ಗರಿಷ್ಠ ಶೇ. 25
* ಇಂಡೋನೇಷ್ಯಾ: ಗರಿಷ್ಠ ಶೇ. 25
* ಮಲೇಷ್ಯಾ: ಗರಿಷ್ಠ ಶೇ. 25
* ಥೈಲ್ಯಾಂಡ್: ಗರಿಷ್ಠ ಶೇ. 25
* ಕಾಂಬೋಡಿಯಾ: ಗರಿಷ್ಠ ಶೇ. 25
* ಯುರೋಪಿಯನ್ ಯೂನಿಯನ್ : ಗರಿಷ್ಠ ಶೇ. 20


Spread the love

About Laxminews 24x7

Check Also

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು – 2 ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಸೂಚನೆ

Spread the loveನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ  ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ