ಚಿಕ್ಕೋಡಿ:ತಾಲೂಕಿನ ಮಜಲಟ್ಟಿ ಸರ್ಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ರ‍್ಯಾಂಕ್ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಇತ್ತೀಚಿಗೆ ಜರುಗಿದ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಶಾಸಕ ದುರ್ಯೋಧನ ಐಹೊಳೆ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಇದೇ ಸಮಯದಲ್ಲಿ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ಗುರಿ ಇಟ್ಟು ಶ್ರದ್ಧೆಯಿಂದ ನಿರಂತರ ಪ್ರಯತ್ನಿಸಿದರೆ ಯಶಸ್ಸು ಶತಸಿದ್ಧ. ಸರ್ಕಾರಿ ಕಾಲೇಜುಗಳೆಂದರೆ ಕೀಳರಿಮೆ ಬೇಡ, ಬಡತನದಲ್ಲಿ ಬೆಳೆದ ನಾನು ಅನುಭವದಿಂದ ಹೇಳುತ್ತಿದ್ದೇನೆ, ಬಡ ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಕೀರ್ತಿ ಪತಾಕೆ ಹಾರಿಸಿ, ಕಲಿತ ಶಾಲೆ ಹಾಗೂ ಹೆತ್ತವರಿಗೆ ಗೌರವ ತರಬೇಕು.
ಸಾಧಕ ವಿದ್ಯಾರ್ಥಿಗಳ ಶ್ರಮವನ್ನು ಶ್ಲಾಘಿಸಿದ ಶಾಸಕರು, ಅವರಿಗೆ ವೈಯಕ್ತಿಕವಾಗಿ ಲ್ಯಾಪ್ಟಾಪ್ ನೀಡುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು. “ದಿ. ಬಿ.ಆರ್. ಸಂಗಪ್ಪಗೋಳ ಅವರೊಂದಿಗೆ ಸೇರಿ ಅಂದು ನಾವು ನೆಟ್ಟ ಶಿಕ್ಷಣದ ಸಸಿ ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಹೆಮ್ಮರವಾಗಿ ಬೆಳೆದು ನಿಂತಿದೆ. ದೇಶದಲ್ಲಿ ಮಜಲಟ್ಟಿ ಕಾಲೇಜು ಹೆಸರು ಮಾಡುವಂತಾಗಲಿ, ಎಲ್ಲ ಸೌಲಭ್ಯಗಳನ್ನು ನೀಡಲು ನಾನು ಸದಾ ಕಟಿಬದ್ಧ,” ಎಂದು ಭರವಸೆ ನೀಡಿದರು.
ರಾಜ್ಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿನಿ ವರ್ಷಾಂಜಲಿ ಕಾಂಬಳೆ ಮಾತನಾಡಿ, “ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಪ್ರೋತ್ಸಾಹವೇ ನನ್ನ ಈ ಸಾಧನೆಗೆ ಕಾರಣ,” ಎನ್ನುತ್ತಾ ಭಾವುಕಳಾದಳು. ಮತ್ತೊಬ್ಬ ಸಾಧಕಿ ವಿಧ್ಯಾರ್ಥಿನಿ ಐಶ್ವರ್ಯಾ ಪೂಜಾರಿ ಸರ್ಕಾರಿ ಕಾಲೇಜಿನಲ್ಲಿ ಸಿಗುತ್ತಿರುವ ಅತ್ಯಾಧುನಿಕ ಸೌಕರ್ಯ ಮತ್ತು ಗುಣಮಟ್ಟದ ಕಲಿಕೆಯೇ ನಮ್ಮ ಸಾಧನೆಗೆ ಮೆಟ್ಟಿಲಾಯಿತು ಎಂದರು. ವಿದ್ಯಾರ್ಥಿನಿಯರಾದ ಐಶ್ವರ್ಯಾ ಹಿರೆಮಠ ಹಾಗೂ ಪೂರ್ಣಿಮಾ ಕರ್ವೆನ್ನವರ ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ವಿಜಯ ಕೋಠೀವಾಲೆ ಮಾತನಾಡಿ, “ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಶಿಕ್ಷಣ ದೊರಕಿಸಿಕೊಡುವಲ್ಲಿ ಶಾಸಕ ಡಿ.ಎಂ. ಐಹೊಳೆ ಅವರ ಕಾರ್ಯ ಶ್ಲಾಘನೀಯ,” ಎಂದರು. ಪ್ರಾಂಶುಪಾಲರಾದ ಕೋಳಿ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಶಾಸಕರ ಸಹಕಾರ ಮತ್ತು ಎಲ್ಲರ ಒಗ್ಗಟ್ಟಿನ ಶ್ರಮವೇ ಇಂದಿನ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಜೆ.ಪಿ. ತಂಗಡಿ ಮಾತನಾಡಿದರು. ಉಪನ್ಯಾಸಕ ವಿಶ್ವನಾಥ ಚೌಗಲಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ಆರ್.ಬಿ. ಪಾಟೀಲ, ಎಚ್.ಎಸ್. ಟಕ್ಕನ್ನವರ, ಎಮ್.ಡಿ. ಚೌಗಲಾ, ಜಿ.ಆರ್. ಬಿರಾದಾರ, ಎಸ್.ಆರ್. ಹಾರೂಗೊಪ್ಪ, ಸುರೇಶ ಗಟ್ಟಿ, ಆರ್.ಆರ್. ಕಾಗಲೆ, ಎಮ್.ವಿ. ಬಡಿಗೇರ, ಪ್ರೀಯಾ ಹಂಚಿನಮನಿ, ಆರ್.ಎಸ್. ಸಂಕಪಾಳ ಸೇರಿದಂತೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7