ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 205-26ನೇ ಸಾಲಿನ ಪ್ರತಿಷ್ಠಿತ `ಬಿ.ವಿ.ಕಾರಂತ ಪ್ರಶಸ್ತಿ’ಗೆ ಸಾಗರ ತಾಲ್ಲೂಕಿನ ಹೊನ್ನೇಸರದ ಚರಕ ಸಂಸ್ಥೆ ಸಂಸ್ಥಾಪಕ, ಹಿರಿಯ ರಂಗಕರ್ಮಿ ಪ್ರಸನ್ನ ಅವರನ್ನ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕವನ್ನ ಒಳಗೊಂಡಿದೆ.
ಗಾಂಧಿವಾದಿ ಪ್ರಸನ್ನ ಅವರು ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಕಳೆದ 50 ವರ್ಷಗಳಿಂದ ನಿರಂತರವಾಗಿ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಕುರಿತು ಮಾತನಾಡಿದ ಅವರು, ಪ್ರಶಸ್ತಿ ಬಂದಿದ್ದು ಸಂತೋಷವಾಗಿದೆ. ಅದರಲ್ಲೂ ಬಿ.ವಿ.ಕಾರಂತರ ಹೆಸರಿನಲ್ಲಿ ಬಂದಿದ್ದು ಹೆಚ್ಚು ಸಂತೋಷ. ರಂಗಭೂಮಿಯಲ್ಲಿ ಕಾರಂತರದ್ದು ಬಹಳ ದೊಡ್ಡ ಹೆಸರು. ಪ್ರಶಸ್ತಿಯನ್ನು ಸ್ವೀಕರಿಸುವುದೆಂದರೆ ಸಮಾಜ ನೀಡುವ ಗೌರವವನ್ನು ಸ್ವೀಕರಿಸುವುದೆಂದು ಅರ್ಥ. ನನಗೆ ಪ್ರಶಸ್ತಿಯ ಹಣ ಅಗತ್ಯವಿಲ್ಲ, ಎರಡು ಹೊತ್ತಿನ ಊಟ ಹಾಕಿ ಸಾಕುತ್ತಿರುವ ಚರಕ ಸಂಸ್ಥೆಗೆ ಈ ಪ್ರಶಸ್ತಿಯ ಹಣವನ್ನ ನೀಡುತ್ತಿದ್ದೇನೆ. ಇದು ಕೂಡ ಬಹಳ ಸಂತೋಷದ ಸಂಗತಿ ಎಂದರು.
ಚರಕದ ಮಹಿಳೆಯರು ಈ ಕೈಮಗ್ಗ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚರಕದ ಅಡಿಯಲ್ಲಿ ʻಗಾಂಧಿ ಸಂಸ್ಥೆʼಯನ್ನ ಆರಂಭಿಸಲು ಸಿದ್ಧತೆ ಕೈಗೊಂಡಿದ್ದಾರೆ. ಆ ಸಂಸ್ಥೆಯ ಮೂಲಕ ರಾಜ್ಯದ ಎಲ್ಲಾ ಯುವಕ-ಯುವತಿಯರಿಗೆ ಸುಸ್ಥಿರ ಬದುಕಿನ ತರಬೇತಿ ನೀಡಲಿದ್ದಾರೆ. ʻಗಾಂಧಿ ಸಂಸ್ಥೆʼಯ ಮುಂದಾಳತ್ವ ವಹಿಸಿಕೊಳ್ಳಬೇಕೆಂದು ನನಗೆ ತಿಳಿಸಿದ್ದಾರೆ. ನಾನು ಸಂತೋಷದಿಂದ ಒಪ್ಪಿದ್ದೇನೆ. ಆ ಕೆಲಸಕ್ಕೆ ಈ ಪ್ರಶಸ್ತಿಯ ಹಣ ವಿನಿಯೋಗವಾಗಲಿದೆ ಎಂದು ತಿಳಿಸಿದ್ದಾರೆ.
Laxmi News 24×7