ಕೊಪ್ಪಳ: ಈಗಿರುವ 25 ಸಚಿವರನ್ನು ಸಂಪುಟದಿಂದ ಕೈಬಿಟ್ಟು, ಹೊಸಬರಿಗೆ ಅವಕಾಶ ನೀಡಿದರೆ ಅನುಭವ ಬರುತ್ತದೆ. ಖಾಯಂ ಇವರೇ ಇರಬೇಕೆಂದರೆ ಹೇಗೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಕೊಪ್ಪಳ(Koppala) ಜಿಲ್ಲೆಯ ಕುಕನೂರುನಲ್ಲಿ ಮಾತನಾಡಿದ ಅವರು, ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಸಿಎಂ ಸ್ಥಾನ ಕೇಳುವುದರಲ್ಲೂ ತಪ್ಪಿಲ್ಲ. ಶಾಸಕರ ದೆಹಲಿ ಪ್ರವಾಸ ಕೈಗೊಂಡರೆ ತಪ್ಪೇನಿದೆ ಎಂದು ಕೇಳಿದರು.
ನನ್ನನ್ನು ಮಂತ್ರಿ, ಸಿಎಂ ಹಾಗೂ ಪ್ರಧಾನ ಮಂತ್ರಿ ಮಾಡುತ್ತಾರೆ ಎಂದರೆ ನಾನು ಯಾಕೆ ಬೇಡ ಎನ್ನಲಿ? ಆದರೆ ಅದು ಆಗಬೇಕಲ್ಲ. ಮಂತ್ರಿ ಆಗಬೇಕೆಂದರೆ ಪಕ್ಷದ ವರಿಷ್ಠರು, ಸಿಎಂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ನಾನೇ ಹೆಚ್ಚು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾನೆ. ಆದರೆ ನನ್ನನ್ನೇ ಮಂತ್ರಿ ಮಾಡಲಿಲ್ಲ. ಏನೋ ಸುಮ್ಮನೆ ಒಂದು ಪೋಸ್ಟ್ ನೀಡಿದ್ದಾರೆ. ಈ ಪೋಸ್ಟ್ ನಲ್ಲಿ ಸಿಎಂ ಜೊತೆ ಸೇರಿ ಏನೋ ಒಳ್ಳೆಯ ಬಜೆಟ್ ನೀಡಬಹುದು. ಆದರೆ ಏನೂ ಅಧಿಕಾರ ಇಲ್ಲ. ಮಂತ್ರಿಯಾದರೆ ಆ ಇಲಾಖೆಯ ಜವಾಬ್ದಾರಿ ಇರುತ್ತದೆ. ನನ್ನನ್ನು ಮಂತ್ರಿ ಮಾಡುವುದು ಬಿಡುವುದು ಸಿಎಂ, ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷಕ್ಕೆ ನಿಷ್ಠೆಯಿಂದ ಇದ್ದೇವೆ, ಪಕ್ಷದ ಜೊತೆಗೆ ಇದ್ದೇವೆ. ಒಳ್ಳೆಯ ಜನ ಬರಬೇಕು, ಒಳ್ಳೆಯವರು ಮಂತ್ರಿ ಆಗಬೇಕು. ಇನ್ನುಳಿದ ಅವಧಿಗೆ ಒಳ್ಳೆಯ ಜನಪರ ಸರಕಾರ ಕೊಡಬೇಕೆನ್ನುವುದು ನನ್ನ ಆಸೆಯಾಗಿದೆ ಎಂದು ತಿಳಿಸಿದರು.
Laxmi News 24×7