Breaking News

ಸರ್ಕಾರದಿಂದ ಎರಡನೇ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆ

Spread the love

ಬೆಂಗಳೂರು: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಎರಡನೇ ಕಂತಿನ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಮೊದಲ ಕಂತಿನಲ್ಲಿ ತಲಾ 2,500 ರೂಪಾಯಿ ವಿತರಿಸಿದ್ದ ಸರ್ಕಾರ, ಇದೀಗ ಎರಡನೇ ಕಂತಿನಲ್ಲಿ ಬಾಕಿ ಇರುವ 2,500 ರೂಪಾಯಿಗಳನ್ನು ಅರ್ಹ ರೈತರ ಖಾತೆಗೆ ಜಮೆ ಮಾಡಲು ಸೂಚಿಸಿದೆ.

ಈ ಪರಿಹಾರ ವಿತರಣೆಗೆ ಸರ್ಕಾರ ಒಟ್ಟು 17 ಮಾರ್ಗಸೂಚಿ ಹಾಗೂ ಷರತ್ತುಗಳನ್ನು ವಿಧಿಸಿದೆ. ನಿಯಮಗಳ ಪ್ರಕಾರ, ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ಜಮೀನಿಗೆ ಮಾತ್ರ ಪರಿಹಾರ ಸಿಗಲಿದ್ದು, ಒಬ್ಬ ರೈತನಿಗೆ ಗರಿಷ್ಠ 2 ಹೆಕ್ಟೇರ್‌ವರೆಗಿನ ಜಮೀನಿಗೆ ಪರಿಹಾರ ನೀಡಲಾಗುತ್ತದೆ.

ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 11,000 ರೂ., ನೀರಾವರಿ ಬೆಳೆಗಳಿಗೆ 22,000 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಗರಿಷ್ಠ 30,000 ರೂಪಾಯಿವರೆಗೆ ಪರಿಹಾರ ನಿಗದಿಪಡಿಸಲಾಗಿದೆ.

ಪ್ರಮುಖ ಷರತ್ತುಗಳು ಏನು?
ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಂದ ಪರಿಹಾರ ವಿತರಣೆ ಆರಂಭವಾಗಲಿದೆ. ಇದರಲ್ಲಿ ಮೊದಲಿಗೆ ಮಳೆಯಾಶ್ರಿತ ಬೆಳೆಗಾರರು, ನಂತರ ನೀರಾವರಿ ಬೆಳೆಗಾರರು ಹಾಗೂ ಕೊನೆಯಲ್ಲಿ ಬಹುವಾರ್ಷಿಕ ಬೆಳೆ ಬೆಳೆದ ರೈತರಿಗೆ ಹಣ ಬಿಡುಗಡೆಯಾಗಲಿದೆ.

ಬೆಳೆ ಪರಿಹಾರ ಪಡೆಯುವ ರೈತರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ಜೋಡಣೆಯಾಗಿರಬೇಕು.

ಆಯಾ ತಾಲ್ಲೂಕುವಾರು ಬೆಳೆಹಾನಿ ಸಮೀಕ್ಷೆಯಲ್ಲಿ ನಮೂದಾಗಿರುವ ಜಮೀನುಗಳ ರೈತರಿಗೆ ಮಾತ್ರ ಈ ಪರಿಹಾರ ಅನ್ವಯವಾಗುತ್ತದೆ.

ವಿವಿಧ ನೀರಾವರಿ ಯೋಜನೆಗಳಿಗಾಗಿ ಭೂಸ್ವಾಧೀನಗೊಂಡಿರುವ ಜಮೀನುಗಳು ಹಾಗೂ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ (Conversion) ಆಗಿರುವ ಜಮೀನುಗಳ ರೈತರಿಗೆ ಪರಿಹಾರ ಸಿಗುವುದಿಲ್ಲ.

ಜಂಟಿ ಖಾತೆದಾರರಿದ್ದಲ್ಲಿ ಆಯಾ ರೈತರ ಹೆಸರಿನಲ್ಲಿ ನೋಂದಾಯಿತವಾಗಿರುವ ವಿಸ್ತೀರ್ಣಕ್ಕೆ ಮಾತ್ರ ಪರಿಹಾರ ನೀಡಲಾಗುತ್ತದೆ. ಒಂದು ವೇಳೆ ಒಂದೇ ಹಿಸ್ಸೆ ಜಮೀನಿಗೆ ಬಹು ಮಾಲೀಕರಿದ್ದಲ್ಲಿ, ಆ ಜಮೀನಿನ ಒಂದು ಬೆಳೆಗೆ ಮಾತ್ರ ಪರಿಹಾರ ದೊರೆಯಲಿದೆ.

ಒಂದೇ ಜಮೀನಿನಲ್ಲಿ ಒಂದಕ್ಕಿಂತ ಹೆಚ್ಚು ಬೆಳೆ ಬೆಳೆದಿದ್ದರೆ, ಯಾವ ಬೆಳೆಗೆ ಅತಿ ಹೆಚ್ಚು ಹಾನಿಯಾಗಿದೆಯೋ ಆ ಬೆಳೆಗೆ ಪರಿಹಾರ ನೀಡಲಾಗುತ್ತದೆ. ಅಲ್ಲದೆ, ಒಬ್ಬ ರೈತನಿಗೆ ಎರಡು-ಮೂರು ತಾಲ್ಲೂಕುಗಳಲ್ಲಿ ಜಮೀನಿದ್ದರೂ ಒಟ್ಟಾರೆಯಾಗಿ ಗರಿಷ್ಠ 2 ಹೆಕ್ಟೇರ್‌ಗೆ ಮಾತ್ರ ಪರಿಹಾರ ಸಿಗಲಿದೆ.


Spread the love

About Laxminews 24x7

Check Also

ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಜೈಲು – 2 ವಾರಗಳಲ್ಲಿ ಶರಣಾಗುವಂತೆ ಸುಪ್ರೀಂ ಸೂಚನೆ

Spread the loveನವದೆಹಲಿ: ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಕೊಲೆ ಕೇಸ್‌ನಲ್ಲಿ  ಹೈಕೋರ್ಟ್ ಬೇಲ್ ಮೇಲೆ ಹೊರಗೆ ಬಂದಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ