ಬೆಳಗಾವಿ : ಎಲ್ಲ ಸರ್ಕಾರದಲ್ಲೂ ಸಿಎಂ ಬದಲಾವಣೆ ಚರ್ಚೆಗಳಾಗಿವೆ. ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಿದೆ. ಎಲ್ಲ ಸರ್ಕಾರದಲ್ಲೂ ಸಿಎಂ ಸ್ಥಾನದ ಆಕಾಂಕ್ಷಿಗಳು ಕೇಳಿಯೇ ಕೇಳುತ್ತಾರೆ. ತಂದೆಯವರೇ ಐದು ವರ್ಷದ ಅವಧಿ ಮುನ್ನಡೆಸಿಕೊಂಡು ಹೋಗಲಿ ಎಂಬುದು ನಮ್ಮ ವೈಯಕ್ತಿಕ ಬೇಡಿಕೆಯಾಗಿದ್ದು, ಈ ಚರ್ಚೆಗಳಿಗೆ ಮುಖ್ಯಮಂತ್ರಿಯೇ ಸ್ಪಷ್ಟನೆ ಕೊಟ್ಟಿರುವುದರಿಂದ ಹೆಚ್ಚಿಗೆ ಮಾತನಾಡಲಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಬೈಲಹೊಂಗಲ ತಾಲೂಕಿನ ಸುಖದೇವಾನಂದ ಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಸರ್ಕಾರದ ಅರ್ಧ ಅವಧಿ ಮುಗಿದ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗುವುದು ವಾಡಿಕೆ. ಹೀಗಾಗಿ, ಶಾಸಕರು ಕೇಳಿಕೊಂಡಿದ್ದಾರೆ. ಇದು ಹೊಸ ಬೇಡಿಕೆಯಲ್ಲ. ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ತಂದೆಯವರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ಕೇಳುವುದು ಸರಿಯಲ್ಲ. ಅವರು ಸಿಎಂ ಆಗಿರುವರೆಗೂ ನಾನು ಆಕಾಂಕ್ಷಿಯಲ್ಲ. ನನಗಿಂತ ಅರ್ಹರು, ಅನುಭವಸ್ಥ ಹಿರಿಯರಿದ್ದಾರೆ. ಅವರಿಗೆ ಅವಕಾಶ ಸಿಗಬೇಕು. ಹೊಸ ಶಾಸಕರು ಸಹ ಸಚಿವ ಸ್ಥಾನ ಕೇಳಿದ್ದಾರೆ. ಅನುಭವಸ್ಥರ ಜತೆಗೆ ಹೊಸಬರೂ ಸಚಿವ ಸಂಪುಟದಲ್ಲಿರುತ್ತಾರೆ. ಈ ಸಲವೂ ಅದೇ ರೀತಿ ಆಗುತ್ತದೆ ಎಂದ ಅವರು, ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಬೇಕೆಂಬ ಚರ್ಚೆಗಳಿಗೆ ಪ್ರತಿಕ್ರಿಯೆಸಲು ನಿರಾಕರಿಸಿದರು.
ದಾವಣಗೆರೆ ಉಪಚುನಾವಣೆಯಲ್ಲಿ ನನ್ನ ಮಾಹಿತಿ ಪ್ರಕಾರ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡಿದ್ದಾರೆ. ಆದರೆ, ವರಿಷ್ಠರಿಗೆ ಏನು ಮಾಹಿತಿ ಲಭಿಸಿದೆ ಗೊತ್ತಿಲ್ಲ. ಅದರ ಪ್ರಕಾರ ತೀರ್ಮಾನ ಕೈಗೊಂಡಿದ್ದಾರೆ. ಈಗ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ನಾನು ಪ್ರತಿಕ್ರಿಯೆಸುವುದಿಲ್ಲ. ಜಮೀರ್ ಅಹ್ಮದ್ ನಮ್ಮ ಪಕ್ಷದ ಹಿರಿಯ ಮುಖಂಡರು. ದಾವಣಗೆರೆ, ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದಾರೆ. ಪಕ್ಷಕ್ಕೆ ಅವರು ಪ್ರಾಮಾಣಿಕವಾಗಿ ದುಡಿದಿದ್ದಾರೆ ಎಂಬ ನಂಬಿಕೆ ನನಗಿದೆ. ಆದರೆ ಹೈಕಮಾಂಡ್‌ಗೆ ಏನು ಮಾಹಿತಿ ಹೋಗಿದೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಪಂ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಗೆ ಹೈಕೋರ್ಟ್ ಮೊರೆ ಹೋಗಲು ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲು ಅವಕಾಶವಿದೆ. ಮುಂದೆ ಏನಾಗುತ್ತದೆ ನೋಡೋಣ ಎಂದು ಡಾ.ಉಯತೀಂದ್ರ ಹೇಳಿದರು.
Laxmi News 24×7