ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಅವರು ಗ್ರಾಮದ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಕೆರೂರ ಗ್ರಾಮದಲ್ಲಿ ಸುಸಜ್ಜಿತ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಕಾಮಗಾರಿಗಾಗಿ ಬರೋಬ್ಬರಿ 19 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸುವಲ್ಲಿ ತಂದೆ ಹಾಗೂ ಮಗನ ಜೋಡಿ ಯಶಸ್ವಿಯಾಗಿದೆ. ಈ ಮಹತ್ವದ ಯೋಜನೆಯ ಅಧಿಕೃತ ಕಾಮಗಾರಿ ಆದೇಶ ಪ್ರತಿಯನ್ನು ಇಂದು ಪ್ರಕಾಶ ಹುಕ್ಕೇರಿ ಅವರು ಗ್ರಾಮಸ್ಥರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ ಹುಕ್ಕೇರಿ ಅವರು, ರೈತರಿಗೆ ಸಕಾಲಕ್ಕೆ ಗುಣಮಟ್ಟದ ವಿದ್ಯುತ್ ಒದಗಿಸುವುದು ಮತ್ತು ಕಡಿಮೆ ವೋಲ್ಟೇಜ್ ಸಮಸ್ಯೆಯಿಂದ ಜನರಿಗೆ ಮುಕ್ತಿ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಶಾಸಕ ಗಣೇಶ ಹುಕ್ಕೇರಿ ಅವರು ಕ್ಷೇತ್ರದ ಪ್ರತಿಯೊಂದು ಹಳ್ಳಿಯ ಮೂಲಸೌಕರ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದು, ಅದರ ಪರಿಣಾಮವಾಗಿಯೇ ಇಂದು ಕೆರೂರ ಗ್ರಾಮಕ್ಕೆ ಇಷ್ಟು ದೊಡ್ಡ ಮೊತ್ತದ ಅನುದಾನ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. 19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ವಿದ್ಯುತ್ ಕೇಂದ್ರವು ಈ ಭಾಗದ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಹೆಚ್ಚಿನ ವೇಗ ನೀಡಲಿದೆ, ಈ ಮಹತ್ವಾಕಾಂಕ್ಷಿ ಯೋಜನೆಯು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಕ್ರಮ ವಹಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾಮಗಾರಿಯ ಆದೇಶ ಪ್ರತಿಯನ್ನು ಸ್ವೀಕರಿಸಿದ ಗ್ರಾಮಸ್ಥರು ಮತ್ತು ಮುಖಂಡರು, ಹುಕ್ಕೇರಿ ಕುಟುಂಬದ ಅಭಿವೃದ್ಧಿ ಪರ ಚಿಂತನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ಉಪಕೇಂದ್ರ ಸ್ಥಾಪನೆಯಿಂದ ಕೇವಲ ಕೆರೂರ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ವಿದ್ಯುತ್ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲಿದೆ.
ಈ ವೇಳೆ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ವೀರೇಂದ್ರ ಪಾಟೀಲ, ಮಲ್ಲಪ್ಪ ಭಾಗಿ, ಚನ್ನಗೌಡ ಪಾಟೀಲ, ರವಿ ಪಾಟೀಲ, ಪ್ರಕಾಶ ಬ್ಯಾಳೆ, ಮಹೇಶ ಪಾಟೀಲ, ಸುರೇಶ ಬಾಡಕರ, ವಿಠಲ ವಾಳಕೆ, ಇಂಧನ ಇಲಾಖೆ ಅಧಿಕಾರಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Laxmi News 24×7