ಶಿವಮೊಗ್ಗ: ಭದ್ರಾ ನಾಲೆಗೆ ನೀರು ಹರಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಒಣಗುತ್ತಿರುವ ತೋಟ – ಗದ್ದೆಗಳಿಗೆ 20 ದಿನ ನೀರು ಹರಿಸುವಂತೆ ಸಾವಿರಾರು ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶಿವಮೊಗ್ಗ ನಗರದ ಪುರಲೆಯಿಂದ ಡಿಸಿ ಕಚೇರಿವರೆಗೆ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದಾರೆ. ರ್ಯಾಲಿಯಲ್ಲಿ ಬಂದ ಸಾವಿರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಡಿಸಿ ಕಚೇರಿ ಗೇಟ್ ತಳ್ಳಿ ರೈತರು ಒಳನುಗ್ಗಿದ್ದಾರೆ. ಡಿಸಿ ಕಚೇರಿ ಎದುರಿನ ಎರಡು ರಸ್ತೆ ಬ್ಲಾಕ್ ಮಾಡಿ, ಪ್ರತಿಭಟಿಸಿದ್ದಾರೆ.
ಭದ್ರಾ ಬಲ ಹಾಗೂ ಎಡದಂಡೆ ನಾಲೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯಿಂದ ಈ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ವರಿಷ್ಠ ಕೆ.ಟಿ ಗಂಗಾಧರ್ ಭಾಗಿಯಾಗಿದ್ದರು. ಪ್ರತಿಭಟನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆ ವೇಳೆ, ನಮ್ಮನ್ನು ಬಂಧಿಸೋದಾದ್ರೇ ಬಂಧಿಸಿ. ನಾವು ಮನೆಗೆ ಹೋಗಲ್ಲ. ಪೊಲೀಸರೇ ಊಟ ಕೂಡ ರೆಡಿ ಮಾಡಿಕೊಳ್ಳಿ. ಜೈಲುಗಳು ಖಾಲಿ ಇದ್ದಾವ ಕೇಳಿಕೊಳ್ಳಿ ಎಂದು ರೈತರು ಪೊಲೀಸರಿಗೆ ಸವಾಲು ಹಾಕಿದ್ದಾರೆ. ನಾಳೆಯಿಂದ ದನ- ಕರುಗಳ ಜೊತೆಗೆ ಹೋರಾಟಕ್ಕೆ ಬರುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗ ನಗರದ ಮಹಾವೀರ ವೃತ್ತದಲ್ಲಿ ಸರಪಳಿ ರಚಿಸಿದ ರೈತರು, ಸರ್ಕಲ್ ಸುತ್ತಲೂ ಟ್ರಾಕ್ಟರ್ ನಿಲ್ಲಿಸಿ, ಸಂಪೂರ್ಣ ಸರ್ಕಲ್ ಬ್ಲಾಕ್ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಡಿಸಿ ಕಚೇರಿ ಎದುರಿನ ರಸ್ತೆ ಡಿವೈಡರ್ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಡಿವೈಡರ್ ಮೇಲೆನ ಕಬ್ಬಣದ ರಾಡ್ಗಳು ಮುರಿದು ಹೋಗಿವೆ.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಳಿ ಹಾಗೂ ಭದ್ರಾ ಕಾಡಾದ ಅಧಿಕಾರಿಗಳು ಭೇಟಿ ನೀಡಿ, ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.4 ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಸಭೆ ನಿರ್ಣಯದ ಬಳಿಕ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗಾವಿಯಲ್ಲಿ ಸಭೆ ಕರೆದಿದ್ದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ತೋಟ ಒಣಗಿದ ಮೇಲೆ ನೀರು ಹರಿಸಿದ್ರೇ ಏನು ಪ್ರಯೋಜನ? ಶಿವಮೊಗ್ಗದ ಭದ್ರಾ ಕಾಡಾ ಕಚೇರಿಯಲ್ಲೇ ಸಭೆ ಕರೆಯಿರಿ ಎಂದು ಆಗ್ರಹಿಸಿದ್ದಾರೆ.
Laxmi News 24×7