ನವದೆಹಲಿ : ಕೊರೋನಾ ಮಹಾಮಾರಿ ಪ್ರಪಂಚದಾದ್ಯಂತ ಮರಣಮೃದಂಗ ಬಾರಿಸುತ್ತಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೋನಾ ವಿರುದ್ಧ ಭಾರತ ಲಾಕ್ ಡೌನ್ ಹೋರಾಟ ಮಾಡುತ್ತಿದೆ. ಇದೆ ಹೊತ್ತಲ್ಲಿ ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಹಣಕಾಸಿನ ನೆರವನ್ನು ಕೋರಿದ್ದಾರೆ. ಈ ಕೊರೊನಾ ನಿಯಂತ್ರಣ ಕ್ರಮಕ್ಕಾಗಿ ದೇಶದ ಜನರು ಕೈಜೋಡಿಸಿ, ಹಣಕಾಸಿನ ನೆರವನ್ನು ನೀಡುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಕ್ಷಣಮಾತ್ರದಲ್ಲೇ ಸ್ಪಂದಿಸಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಉಳಿತಾಯದಿಂದ ಬರೋಬ್ಬರಿ 25 ಕೋಟಿ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೊನ್ನೆಯಷ್ಟೇ ಸೂಪರ್ ಸ್ಟಾರ್ ರಜನೀಕಾಂತ್, ಟಾಲಿವುಡ್ ನಟ ಅಲ್ಲು ಅರ್ಜುನ್, ಪ್ರಭಾಸ್ ಸೇರಿದಂತೆ ಹಲವು ನಟರು ಸಹಾಯ ಹಸ್ತ ಚಾಚಿದ್ದರು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳಿಗೆ ತೆಲುಗು ಸ್ಟಾರ್ ನಟರು ಭಾರೀ ಮೊತ್ತದ ದೇಣಿಗೆ ನೀಡುತ್ತಿದ್ದಾರೆ. ಪವನ್ ಕಲ್ಯಾಣ್ 50 ಲಕ್ಷ, ನಿತಿನ್ 10 ಲಕ್ಷ, ಮಹೇಶ್ ಬಾಬು ಮತ್ತು ಪ್ರಭಾಸ್ ತಲಾ 1 ಕೋಟಿ ರೂ. ನೀಡಿದ್ದಾರೆ. ಸ್ಟಾರ್ ನಟ ಅಲ್ಲು ಅರ್ಜುನ್ 1.25 ಕೋಟಿ ದೇಣಿಗೆ ನೀಡುವ ಮೂಲಕ ತಮ್ಮ ಹೃದಯ ವೈಶಾಲ್ಯತೆ ಮೆರೆದಿದ್ದರು.
ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಆರ್ಥಿಕ ಸಹಾಯ ನೀಡಿದ್ದಾರೆ. ಕೊರೊನಾವೈರಸ್ ತಡೆಗೆ ಸಚಿನ್ 50 ಲಕ್ಷ ರೂ. ನೆರವು ನೀಡಿದ್ದಾರೆ. ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಭಾರತದ ಅನೇಕ ಕ್ರೀಡಾತಾರೆಯರು ನೆರವಿಗೆ ಬಂದಿದ್ದಾರೆ.
# ದಿನಗೂಲಿ ಕಾರ್ಮಿಕರಿಗೆ ಆಸರೆಯಾದ ನಿಖಿಲ್ ಕುಮಾರಸ್ವಾಮಿ :
ಕೊರೊನಾ ವೈರಸ್‌ನಿಂದ ಇಡೀ ದೇಶದಲ್ಲಿ ಬಂದ್ ವಾತಾವರಣ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಕೆಲಸ-ಕಾರ್ಯಗಳು ಸ್ಥಗಿತಗೊಂಡಿವೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗದ ಮೇಲೂ ಆಗಿದೆ. ಎಲ್ಲಾ ಉದ್ಯಮಗಳು ಸ್ಥಗಿತವಾಗಿ, ಜನರು ದುಡಿಮೆಯಿಲ್ಲದೇ ಮನೆಯಲ್ಲೇ ಕೂರಬೇಕಾಗಿದೆ. ಯಾವುದೇ ಥರದ ಧಾರಾವಾಹಿ ಮತ್ತು ಸಿನಿಮಾಗಳ ಚಿತ್ರೀಕರಣ ಸದ್ಯಕ್ಕೆ ನಡೆಯುತ್ತಿಲ್ಲ. ಇದರಿಂದ ಚಲನಚಿತ್ರ ಕಾರ್ಮಿಕರಿಗೆ ತೊಂದರೆ ಆಗಿದೆ. ಸಿನಿಮಾ ಎಂದರೆ, ಅಲ್ಲಿ ಬರೀ ಕಲಾವಿದರು, ತಂತ್ರಜ್ಞರು ಮಾತ್ರವಲ್ಲ, ದಿನಗೂಲಿ ಕಾರ್ಮಿಕರು ಇರುತ್ತಾರೆ.
ಶೂಟಿಂಗ್ ಇದ್ದಾಗಲಷ್ಟೇ ಅವರಿಗೆ ಕೆಲಸ. ಆದರೆ, ಈಗ ಎಲ್ಲಿಯೂ ಚಿತ್ರೀಕರಣವೇ ನಡೆಯುತ್ತಿಲ್ಲ. ಹಾಗಾಗಿ, ಲೈಟ್ ಬಾಯ್ಸ್, ಫೈಟರ್ಸ್, ಯೂನಿಟ್ ಬಾಯ್ಸ್, ಮೇಕಪ್ ಬಾಯ್ಸ್, ಸಹ ನೃತ್ಯಗಾರರು ಹೀಗೆ ಸಾಕಷ್ಟು ವಿಭಾಗಳಲ್ಲಿ ಕೆಲಸ ಮಾಡುವ ಸಾವಿರಾರು ಜನ ಕಾರ್ಮಿಕರು ಒಂದು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ. ದಿನಗೂಲಿ ನಂಬಿ ಬದುಕುತ್ತಿದ್ದ ಸಿನಿಮಾ ಕಾರ್ಮಿಕ ವರ್ಗ ಕಂಗಾಲಾಗಿದೆ. ಇಂತಹ ಸಂದರ್ಭದಲ್ಲಿ ನಟ/ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅಷ್ಟೂ ಕಾರ್ಮಿಕರಿಗೆ ಅವರು ಮನಸ್ಸು ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಲೈಟ್ಸ್ ಬಾಯ್ಸ್ ಅಸೋಸಿಯೇಷನ್, ಯುನಿಟ್ ಬಾಯ್ಸ್ ಅಸೋಸಿಯೇಷನ್, ಪ್ರೊಡಕ್ಷನ್ ಅಸೋಸಿಯೇಷನ್, ಫೈಟರ್ಸ್ ಅಸೋಸಿಯೇಷನ್, ಮೇಕಪ್ ಮೆನ್ ಅಸೋಸಿಯೇಷನ್ ಹೀಗೆ ಸುಮಾರು 18 ಅಸೋಸಿಯೇಷನ್‌ಗಳಿಂದ ಸುಮಾರು 3 ಸಾವಿರಕ್ಕೂ ಅಧಿಕ ಸಿನಿಮಾ ಕಾರ್ಮಿಕರಿದ್ದಾರೆ. ಅವರೆಲ್ಲರಿಗೂ ಕಷ್ಟದ ಸಮಯ. ಸದ್ಯ ಅವರೆಲ್ಲರೂ ಶೂಟಿಂಗ್ ಇಲ್ಲದ ಕಾರಣ, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ, ಅವರ ಖಾತೆಗಳಿಗೆ ನೇರವಾಗಿ ಹಣ ಹಾಕುವುದಕ್ಕೆ ನಿಖಿಲ್ ಕುಮಾರಸ್ವಾಮಿ ತಿರ್ಮಾನಿಸಿದ್ದಾರೆ. ಅದಕ್ಕಾಗಿ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು ಶೀಘ್ರದಲ್ಲೇ ಎಲ್ಲರ ಖಾತೆಗೂ ಹಣ ಜಮೆಯಾಗಲಿದೆ.
# 500 ಕುಟುಂಬಕ್ಕೆ ಪ್ರಣಿತಾರಿಂದ ಆರ್ಥಿಕ ಸಹಾಯ :
ಕೊರೊನಾ ಹಾವಳಿ ಇಂದ ತತ್ತರಿಸಿರುವ ಬಡ ಕಾರ್ಮಿಕರಿಗೆ, ದಿನಗೂಲಿ ನೌಕರರಿಗೆ, ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ಸೆಲೆಬ್ರಿಟಿಗಳು ಸಹಾಯ ಮಾಡುತ್ತಿದ್ದಾರೆ. ನಟಿ ಪ್ರಣಿತಾ ಕೂಡ ಕಷ್ಟದಲ್ಲಿರೋ ದಿನಗೂಲಿ ನೌಕರರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಒಂದು ಕುಟುಂಬಕ್ಕೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ತಿಂಗಳಿಗೆ ಎರಡು ಸಾವಿರ ರೂಪಾಯಿ ಬೇಕಾಗುತ್ತದೆ. ಪ್ರಣಿತಾ ಫೌಂಡೇಶನ್ ಮೂಲಕ 500 ಕುಟುಂಬಗಳಿಗೆ ನಟಿ ಪ್ರಣಿತಾ ನೆರವು ನೀಡಲು ಮುಂದಾಗಿದ್ದಾರೆ.