ಬೆಳಗಾವಿ: ಗ್ರಾಹಕನ ಬ್ಯಾಂಕ್ ಖಾತೆಯಿಂದ ಅನುಮತಿಯಿಲ್ಲದೆ 1.32 ಕೋಟಿ ರೂ. ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ, ಉಳಿದ 86.30 ಲಕ್ಷ ರೂ. ಹಣವನ್ನು ಮರುಪಾವತಿಸದೆ ವಂಚಿಸಿರುವ ಆರೋಪದಡಿ ಕೆನರಾ ಬ್ಯಾಂಕ್‌ನ ಅಧಿಕಾರಿಗಳು ಸೇರಿದಂತೆ ಆರು ಮಂದಿ ವಿರುದ್ಧ ಬೆಳಗಾವಿಯ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿಯ ರುಮೇವಾಡಿ ಕ್ರಾಸ್ ನಿವಾಸಿ, ಗೊಡಂಬಿ ಫ್ಯಾಕ್ಟರಿ ಉದ್ಯಮಿ ಸುರೇಶ ಲಕ್ಷ್ಮಣ ಶಿವನಗೇಕರ (49) ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಉದ್ಯಮದ ವ್ಯವಹಾರಕ್ಕಾಗಿ 2024ರ ಫೆಬ್ರವರಿಯಲ್ಲಿ ತಿಲಕವಾಡಿಯ ಖಾನಾಪುರ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಒಟ್ಟು 2.86 ಕೋಟಿ ರೂ.ಗಳ ಓವರ್‌ಡ್ರಾಫ್ಟ್ (ಒ.ಡಿ.) ಹಾಗೂ ಟರ್ಮ್ ಲೋನ್ ಸೌಲಭ್ಯ ಪಡೆದಿದ್ದರು. ಆದರೆ, ಅವರ ಬ್ಯಾಂಕ್ ಖಾತೆಯಿಂದ 2023ರ ಅಕ್ಟೋಬರ್ 31ರಂದು 5 ಲಕ್ಷ ರೂ., 2024ರ ಫೆಬ್ರವರಿ 19ರಂದು 27.30 ಲಕ್ಷ ರೂ. ಹಾಗೂ ಫೆಬ್ರವರಿ 22ರಂದು 1 ಕೋಟಿ ರೂ. ಸೇರಿ ಒಟ್ಟು 1.32 ಕೋಟಿ ರೂ. ಹಣವನ್ನು ಅವರ ಗಮನಕ್ಕೆ ತಾರದೆ ಹಾಗೂ ಅನುಮತಿ ಪಡೆಯದೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ಹಣ ತಪ್ಪಾಗಿ ಬೇರೆಯವರ ಖಾತೆಗೆ ವರ್ಗಾವಣೆಯಾಗಿದೆ. ಶೀಘ್ರದಲ್ಲೇ ಮರಳಿ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ 46 ಲಕ್ಷ ರೂ. ಹಣವನ್ನು ಮರುಪಾವತಿಸಿದ್ದು, ಉಳಿದ 86.30 ಲಕ್ಷ ರೂ. ಹಣವನ್ನು ಕಳೆದ ಎರಡು ವರ್ಷಗಳಿಂದ ಹಿಂತಿರುಗಿಸದೆ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬ್ಯಾಂಕ್‌ನ ಮಾಜಿ ಮುಖ್ಯ ವ್ಯವಸ್ಥಾಪಕ ನೀರಜಕುಮಾರ ತಿವಾರಿ, ಮಾಜಿ ವ್ಯವಸ್ಥಾಪಕ ನೀರಜಕುಮಾರ ಹಾಗೂ ಹುಬ್ಬಳ್ಳಿ ಮತ್ತು ಬೆಳಗಾವಿ ಪ್ರಾದೇಶಿಕ ಕಚೇರಿಗಳ ಹಿರಿಯ ಅಧಿಕಾರಿಗಳಾದ ಜಗದೀಶ ಸ್ವಾಮಿ, ಶ್ರೀವಿದ್ಯಾ, ಶಿವರಾಮಕೃಷ್ಣ ಮತ್ತು ಕೆ. ವಿಜಯಕುಮಾರ ವಿರುದ್ಧ ದೂರು ನೀಡಲಾಗಿದೆ.
ಬ್ಯಾಂಕ್ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಹಾಗೂ ಖುದ್ದಾಗಿ ಭೇಟಿ ನೀಡಿ ಪತ್ರದ ಮೂಲಕ ಹಣ ಮರುಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಬ್ಯಾಂಕ್ ಸಿಬ್ಬಂದಿ ಪರಸ್ಪರ ಒಳಸಂಚು ರೂಪಿಸಿ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ವಂಚಿಸಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ.
ಹಣ ಮರುಪಾವತಿಸುವ ಭರವಸೆಯ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಕಾಯ್ದು, ಕೊನೆಗೂ ಹಣ ಸಿಗದ ಕಾರಣ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 135/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 61(2)(ಎ) ಮತ್ತು 318(4)ರ ಪ್ರಕಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Laxmi News 24×7