ಶಿವಮೊಗ್ಗ: ವಾಕಿಂಗ್ ಹಾಗೂ ಆಟವಾಡಲು ಬಂದವರಿಗೆ ಪೊಲೀಸರು ಶಾಕ್ ಕೊಟ್ಟಿದ್ದು, ಇದ್ದಕ್ಕಿದ್ದಂತೆ ಬನ್ನಿ ವ್ಯಾನ್ ಹತ್ತಿ ಎಂದು ಕರೆದೊಯ್ದಿದ್ದಾರೆ.
ನಗರದ ವಿವಿಧ ಬಡಾವಣೆಗಳಲ್ಲಿ ವಾಯುವಿಹಾರ ಮಾಡುತ್ತಿದ್ದವರನ್ನು ನಗರದ ಒಳಾಂಗಣ ಕ್ರೀಡಾಂಗಣದ ಆವರಣಕ್ಕೆ ಕರೆತಂದು ಡಿಸಿ ಶಿವಕುಮಾರ್, ಎಸ್‍ಪಿ ಶಾಂತರಾಜ್ ಪಾಠ ಮಾಡಿದ್ದಾರೆ. ಇನ್ನೂ ವಿಶೇಷವೆಂದರೆ ಇದಕ್ಕೂ ಮುನ್ನ ಟೀ, ಬಿಸ್ಕೆಟ್ ನೀಡಿ ಆರೈಕೆ ಮಾಡಿದ್ದಾರೆ. ವಿವಿಧ ಬಡಾವಣೆಗಳಿಂದ ಸುಮಾರು 300ಕ್ಕೂ ಹೆಚ್ಚು ಜನ ವಾಕಿಂಗ್‍ಗೆ ಬಂದವರಿಗೆ, ಒಂದೇ ಜಾಗದಲ್ಲಿ ಕರೆ ತಂದು ಪಾಠ ಮಾಡಿದ್ದಾರೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಮಹಿಳೆಯರು, ಪುರುಷರು ವಾಯು ವಿಹಾರ ಮಾಡುತ್ತಿದ್ದರು. ಇನ್ನೂ ಕೆಲವರು ಆಟವಾಡುತ್ತಿದ್ದರು. ಡಿಸಿ, ಎಸ್.ಪಿಯವರು ಎಲ್ಲರಿಗೂ ಬಿಸಿ ಮುಟ್ಟಿಸಿದ್ದು, ಪೊಲೀಸ್ ವ್ಯಾನ್ ಹತ್ತಿಸಿ ಕ್ರೀಡಾಂಗಣಕ್ಕೆ ಕರೆ ತಂದಿದ್ದಾರೆ.
ವಾಕಿಂಗ್‍ಗೆ ಬಂದಿದ್ದ ಸುಮಾರು 300ಕ್ಕೂ ಹೆಚ್ಚು ಜನರನ್ನು ಸ್ಕ್ರೀನಿಂಗ್ ಮಾಡಿ, ಇನ್ನು ಮುಂದೆ ಸೋಂಕು ಹರಡಲು ಕಾರಣರಾಗದಂತೆ, ಮನೆಯಲ್ಲಿಯೇ ಇರಿ ಎಂದು ಡಿಸಿ, ಎಸ್.ಪಿ ಸೂಚಿಸಿದ್ದಾರೆ. ನಂತರ ಈ ಎಲ್ಲರ ಹೆಸರು, ವಿಳಾಸ ಬರೆದುಕೊಂಡಿದ್ದು, ಈ ವೇಳೆ ಯಾಕೆ ಲಾಕ್‍ಡೌನ್ ನಿಯಮ ಉಲ್ಲಂಘಿಸುತ್ತೀರಾ, ಮನೆಯಲ್ಲಿರಿ ಎಂದು ಎಷ್ಟು ಬಾರಿ ಹೇಳಬೇಕು, ಸಾಂಕ್ರಾಮಿಕ ರೋಗ ಹರಡುವುದರ ಬಗ್ಗೆ ನಿಮಗೆ ಭಯ ಇಲ್ವಾ ಎಂದು ಡಿಸಿ ಪ್ರಶ್ನಿಸಿದ್ದಾರೆ.