ಶಿವಮೊಗ್ಗ: ಮಂಗನಕಾಯಿಲೆ ಸೋಂಕು ತಗುಲಿದ್ದ ಮಹಿಳೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಿಂದ ಎಸ್ಕೇಪ್ ಆಗಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಸುಮಿತ್ರಮ್ಮ ಮೆಗ್ಗಾನ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ವೈದ್ಯರು ಪರೀಕ್ಷಿಸಿದ ನಂತರ ಮಹಿಳೆಗೆ ಕೆಎಫ್‍ಡಿ ಪಾಸಿಟಿವ್ ಇರುವ ಅಂಶ ದೃಢಪಟ್ಟಿತ್ತು. ಹೀಗಾಗಿ ಮಹಿಳೆಯ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳೆದ ನಾಲ್ಕು ದಿನದ ಚಿಕಿತ್ಸೆಗೆ ದಾಖಲಿಸಿದ್ದರು.
ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಿತ್ರಮ್ಮ ಅವರಿಗೆ ಖಾಯಿಲೆ ಸ್ವಲ್ಪ ವಾಸಿಯಾಗಿತ್ತು. ಆದರೆ ಪೂರ್ಣ ಪ್ರಮಾಣದಲ್ಲಿ ಖಾಯಿಲೆ ವಾಸಿಯಾಗದ ಕಾರಣ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಯಾರಿಗೂ ಹೇಳದೆ ಕೇಳದೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಘಟನೆಯಿಂದಾಗಿ ಪೇಚಿಗೆ ಸಿಲುಕಿದ ಆಸ್ಪತ್ರೆ ಸಿಬ್ಬಂದಿ ಸುಮಿತ್ರಮ್ಮ ಮನೆಗೆ ಅಂಬುಲೆನ್ಸ್ ತೆಗೆದುಕೊಂಡು ಹೋಗಿ ನಿಮಗೆ ಇನ್ನೂ ಚಿಕಿತ್ಸೆ ಅವಶ್ಯಕತೆ ಇದೆ. ಹೆಚ್ಚಿನ ಚಿಕಿತ್ಸೆಗೆ ನಿಮ್ಮನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುತ್ತೇವೆ ಬನ್ನಿ ಎಂದು ಬೇಡಿಕೊಂಡಿದ್ದಾರೆ. ಆದರೆ ಈ ಮಹಿಳೆ ಮಾತ್ರ ನಾನು ಎಲ್ಲಿಗೂ ಬರುವುದಿಲ್ಲ ಎಂದು ಹಠ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.