Breaking News

ಸರ್ಕಾರಿ ಕಚೇರಿಗಳ 103 ಕೋಟಿ ವಿದ್ಯುತ್ ಬಿಲ್ ಬಾಕಿ – ವಸೂಲಿಗಾಗಿ ಅಖಾಡಕ್ಕಿಳಿದ ಸೆಸ್ಕ್, ಸಂಕಷ್ಟದಲ್ಲಿ ಜನಸಾಮಾನ್ಯರು

Spread the love

ಚಾಮರಾಜನಗರ: ಸರ್ಕಾರಕ್ಕೆ ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸಾಮರ್ಥ್ಯವಿದೆ. ಆದರೆ ಇಲ್ಲಿ ಸರ್ಕಾರಿ ಕಚೇರಿಗಳು  103 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಜನಸಾಮಾನ್ಯರಿಗೆ ತೊಂದರೆ ಎದುರಾಗಿದೆ.

ಹೌದು, ಚಾಮರಾಜನಗರ  ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳು ಬರೋಬ್ಬರಿ 103 ಕೋಟಿಗೂ ಅಧಿಕ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಬಿಲ್ ಪಾವತಿಸುವಂತೆ ಪದೇಪದೇ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಬಾಕಿ ವಸೂಲಿಗೆ ಸೆಸ್ಕ್ ಅಧಿಕಾರಿಗಳು ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಹಲವು ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಅಷ್ಟೇ ಅಲ್ಲ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಸರ್ಕಾರಿ ಇಲಾಖೆಗಳು ಕತ್ತಲಲ್ಲಿ ಮುಳುಗುವಂತಾಗಿದೆ.

ಇದು ಖಾಸಗಿ ಕಂಪನಿಗಳ ಕಥೆಯಲ್ಲ. ಸಾಲ ಮಾಡಿ, ಬಿಲ್ ಕಟ್ಟದ ವ್ಯಾಪಾರಿಗಳ ಕತೆಯೂ ಅಲ್ಲ. ಜನರ ಸೇವೆ ಮಾಡಬೇಕಾದ ಸರ್ಕಾರಿ ಕಚೇರಿಗಳೇ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಥೆ. ಚಾಮರಾಜನಗರ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಸೆಸ್ಕ್‌ಗೆ ಪಾವತಿಸಬೇಕಿರುವ ವಿದ್ಯುತ್ ಬಿಲ್ ಬರೋಬ್ಬರಿ 103 ಕೋಟಿ ರೂಪಾಯಿಗೂ ಅಧಿಕ. ಹಲವು ತಿಂಗಳು ಕಳೆದರೂ ಬಿಲ್ ಪಾವತಿಯಾಗಿಲ್ಲ. ಬಾಕಿ ಮೊತ್ತ ಮಾತ್ರ ಏರುತ್ತಲೇ ಇದೆ.

ಇತ್ತ ವಿದ್ಯುತ್ ಸರಬರಾಜು ಮಾಡಿರುವ ಸೆಸ್ಕ್‌ಗೆ ಬಾಕಿ ವಸೂಲಿ ಮಾಡುವುದು ಅನಿವಾರ್ಯವಾಗಿದೆ. ಬಾಕಿ ಪಾವತಿಸುವಂತೆ ಸರ್ಕಾರಿ ಇಲಾಖೆಗಳಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸೆಸ್ಕ್ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಒಂದೊಂದೇ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದಾರೆ. ಕೆಲವು ಕಚೇರಿಗಳಲ್ಲಿ ಈಗಾಗಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸರ್ಕಾರಿ ಕೆಲಸ ಕಾರ್ಯಗಳಿಗೂ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ

ಸರ್ಕಾರಿ ಇಲಾಖೆಗಳೇ ಬಿಲ್ ಕಟ್ಟದಿದ್ದರೆ ವಿದ್ಯುತ್ ಸರಬರಾಜು ಸಂಸ್ಥೆ ಬಾಕಿ ವಸೂಲಿ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಇನ್ನು ಈ ವಿದ್ಯುತ್ ಬಿಲ್ ಬಾಕಿಯ ಬಿಸಿ ಜನಸಾಮಾನ್ಯರಿಗೂ ತಟ್ಟಿದೆ. ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಬೇಕಾದ ಶುದ್ಧ ಕುಡಿಯುವ ನೀರಿನ ಘಟಕಗಳಿಗೂ ವಿದ್ಯುತ್ ಕಡಿತದ ಬಿಸಿ ತಟ್ಟಿದೆ. ಸರ್ಕಾರಿ ಇಲಾಖೆಗಳ ಬಿಲ್ ಬಾಕಿಗೆ ಜನರಿಗೇಕೆ ಶಿಕ್ಷೆ? ಕುಡಿಯುವ ನೀರಿನ ಘಟಕಗಳೇ ಸ್ಥಗಿತಗೊಂಡರೆ ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗುವುದಿಲ್ಲವೇ? ಒಂದು ಕಡೆ ಸಾರ್ವಜನಿಕ ಸೇವೆ ಒದಗಿಸುವ ಜವಾಬ್ದಾರಿ ಹೊತ್ತಿರುವ ಇಲಾಖೆಗಳು, ಮತ್ತೊಂದೆಡೆ ಬಾಕಿ ವಸೂಲಿಗೆ ಮುಂದಾಗಿರುವ ಸೆಸ್ಕ್. ಈ ನಡುವೆ ಸಂಕಷ್ಟಕ್ಕೆ ಸಿಲುಕುತ್ತಿರುವುದು ಮಾತ್ರ ಜನಸಾಮಾನ್ಯರು.

ಸರ್ಕಾರಿ ಇಲಾಖೆಗಳೇ ವಿದ್ಯುತ್ ಬಿಲ್ ಪಾವತಿಸದಿರುವುದು ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆ ಮೂಡಿಸಿದೆ. ಪ್ರತಿ ತಿಂಗಳು ವಿದ್ಯುತ್ ಬಳಕೆಯಾಗುತ್ತಿದೆ. ಬಿಲ್ ಕೂಡ ಬರುತ್ತಿದೆ. ಆದರೂ ಪಾವತಿ ಮಾತ್ರ ಆಗುತ್ತಿಲ್ಲ. ಇಲಾಖೆಗಳ ನಡುವೆ ಸಮನ್ವಯದ ಕೊರತೆಯೋ ಅಥವಾ ಅನುದಾನದ ಸಮಸ್ಯೆಯೋ ಎಂಬುದು ಸ್ಪಷ್ಟವಾಗಬೇಕಿದೆ. ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದರೂ ಸಂಬAಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡಿಲ್ಲ. ಈಗ ಸೆಸ್ಕ್ ಕಠಿಣ ಕ್ರಮದಿಂದ ಸರ್ಕಾರಿ ಕಚೇರಿಗಳೇ ಕತ್ತಲಲ್ಲಿ ಮುಳುಗುವ ಸ್ಥಿತಿ ಎದುರಾಗಿದೆ.ಇದನ್ನೂ ಓದಿ: ಚಳಿಗಾಲದಲ್ಲಿ ಮಂಜು ಕವಿದ ವಾತಾವರಣ ನಿರ್ಮಾಣ – ಚಾಲಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ KSRTC ಸೂಚನೆ

ಒಟ್ಟಿನಲ್ಲಿ ಜನರಿಗೆ ವಿದ್ಯುತ್ ಬಿಲ್ ಕಟ್ಟದಿದ್ದರೆ ಸಂಪರ್ಕ ಕಡಿತಗೊಳಿಸುವ ಸೆಸ್ಕ್, ಈಗ ಸರ್ಕಾರಿ ಇಲಾಖೆಗಳಿಗೂ ಅದೇ ನಿಯಮ ಅನ್ವಯಿಸುತ್ತಿದೆ. ಆದರೆ ಸರ್ಕಾರಿ ಕಚೇರಿಗಳ ಬಾಕಿಯಿಂದ ಸಾರ್ವಜನಿಕ ಸೇವೆಗಳು ಸ್ಥಗಿತಗೊಳ್ಳುವಂತಾಗಬಾರದು. 103 ಕೋಟಿಗೂ ಅಧಿಕ ರೂಪಾಯಿ ಬಾಕಿ ಯಾವಾಗ ಪಾವತಿಯಾಗಲಿದೆ ಜನರಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೇವೆಗಳು ಯಾವಾಗ ಸುಗಮವಾಗಲಿವೆ? ಎಂಬುದಕ್ಕೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳೇ ಉತ್ತರ ನೀಡಬೇಕಿದೆ.


Spread the love

About Laxminews 24x7

Check Also

ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ ಮಗು ಸಾವು

Spread the loveದಾವಣಗೆರೆ: ಕುರುಕಲು ತಿಂಡಿ ಪೊಟ್ಟಣದಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಮಗು  ಸಾವನ್ನಪ್ಪಿದ ಘಟನೆ ಚನ್ನಗಿರಿ  ಪಟ್ಟಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ