ಕಾರವಾರ/ಶಿವಮೊಗ್ಗ: ಇಂದು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಿದ್ದು, ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ಅಕಾಲಿಕ ಮಳೆಯಾಗಿದ್ದು, ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಗುಡುಗು ಸಹಿತ ಭಾರೀ ಮಳೆಯಾಗಿದೆ. ಅಕಾಲಿಕ ಮಳೆಯಿಂದ ಭೂಮಿ ತಂಪಾಗಿದ್ದು, ಬಿಸಿಲಿನಿಂದ ಬಳಲಿದ್ದ ಜನರು ಒಮ್ಮಿಂದೊಮ್ಮೆಲೆ ಸುರಿದ ಮನೆಯಿಂದ ಸಂತಸಗೊಂಡಿದ್ದಾರೆ.
ಇತ್ತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಅಕಾಲಿಕ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಸಾಗರ ತಾಲೂಕಿನ ಬಳಸಗೋಡು ಗ್ರಾಮದ ಸಮೀಪ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರದ ಕೊಂಬೆ ಬಿದ್ದಿದೆ.
ಪರಿಣಾಮ ಕೆಲಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತ್ತು. ಮಳೆ ನಿಂತ ನಂತರ ಸ್ಥಳೀಯರು ಹಾಗೂ ವಾಹನ ಸವಾರರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ಕೊಂಬೆಯನ್ನು ತೆರವುಗೊಳಿಸಿದರು. ನಂತರ ಸಂಚಾರ ವ್ಯವಸ್ಥೆ ಸುಗಮವಾಯಿತು.