ರಾಯಚೂರು: ಎಷ್ಟು ಹೇಳಿದರೂ ಜನ ಹೊರಗಡೆ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಜನರ ಓಡಾಟ ತಡೆಯಲು ರಾಯಚೂರಿನಲ್ಲಿ ಡ್ರೋಣ್ ಬಳಕೆ ಮಾಡಲಾಗುತ್ತಿದೆ. ರಾಯಚೂರು ಪೊಲೀಸರಿಂದ ವಿನೂತನ ಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಬಡಾವಣೆ, ಓಣಿಗಳಲ್ಲಿ ಜನ ಗುಂಪುಗುಂಪಾಗಿ ಸೇರುವುದನ್ನ ತಡೆಯಲು ಡ್ರೋಣ್ ಬಳಕೆ ಮಾಡಲಾಗುತ್ತಿದೆ.
ಡ್ರೋಣ್ ಶಬ್ದಕ್ಕೆ ಹೆದರಿ ಜನ ಚದುರಿ ಹೋಗುತ್ತಿದ್ದಾರೆ. ಹೋಗದಿರುವವರನ್ನ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಜಿಲ್ಲೆಯಲ್ಲಿ 50 ಚೆಕ್ ಪೋಸ್ಟ್ ಮಾಡಿದ್ದರೂ ಜನ ಸಂದಣಿ ನಿಯಂತ್ರಣವಾಗುತ್ತಿರಲಿಲ್ಲ. ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ನಾನಾ ಪ್ರಯತ್ನ ಮಾಡಿದ್ರೂ, ಲಾಠಿ ಏಟಿಗೂ ಜಗ್ಗದ ಹಿನ್ನಲೆ ಡ್ರೋಣ್ ಬಳಕೆ ಮಾಡುತ್ತಿರುವುದಾಗಿ ರಾಯಚೂರು ಎಸ್ ಪಿ ಡಾ.ಸಿ.ಬಿ.ವೇದಮೂರ್ತಿ ಹೇಳಿದ್ದಾರೆ.
ನಗರದ ಸಿಯತಲಾಬ್, ಆಶಾಪುರ ರಸ್ತೆ ಸೇರಿದಂತೆ ಸುಮಾರು ಪ್ರದೇಶಗಳಲ್ಲಿ ಜನ ಎಷ್ಟೇ ಹೇಳಿದರೂ ಹೊರಗಡೆ ಓಡಾಡುವುದು, ಗುಂಪಾಗಿ ಕೂಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಡ್ರೋಣ್ ಮೂಲಕ ಜನರಲ್ಲಿ ಪೊಲೀಸರು ಎಚ್ಚರಿಕೆ ಮೂಡಿಸುತ್ತಿದ್ದಾರೆ.