ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬದಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಗೂ ಲಾಕ್‍ಡೌನ್ ಎಫೆಕ್ಟ್ ತಟ್ಟಿದೆ. ಇಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ವಿವಾಹ ಸರಳವಾಗಿ ನಡೆಯುತ್ತಿದೆ.
ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍ಡಿಕೆ ಫಾರ್ಮ್‍ಹೌಸ್‍ನಲ್ಲಿ ವಿವಾಹ ನಡೆಯುತ್ತಿದ್ದು, ಪೂರ್ವ ನಿಗದಿಯಾಗಿದ್ದ ದಿನಾಂಕದಂದೇ ಮದುವೆ ನಡೆಯುತ್ತಿದೆ. ಎರಡು ಕುಟುಂಬದವರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆಯಲಿದ್ದು, ನಿಖಿಲ್ ಮತ್ತು ರೇವತಿ ವಿವಾಹ ಬೆಳಗ್ಗೆ 9.30ರಿಂದ 10.20ರ ಶುಭಲಗ್ನದಲ್ಲಿ ನೆರವೇರಲಿದೆ.
ಈಗಾಗಲೇ ಫಾರ್ಮ್‍ಹೌಸ್‍ನಲ್ಲಿ ವರ ನಿಖಿಲ್ ಮತ್ತು ವಧು ರೇವತಿಗೆ ಅರಿಶಿಣ ಶಾಸ್ತ್ರ ಮಾಡಿ ಮುಗಿಸಿದ್ದಾರೆ. ಮುಂದಿನ ಶಾಸ್ತ್ರಗಳಿಗೆ ಸಿದ್ಧತೆ ನಡೆಯುತ್ತಿದೆ. ಈ ಹಿಂದೆ ರಾಮನಗರದ ಜನಪದ ಲೋಕದ ಬಳಿ ವಿವಾಹ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪರಿಣಾಮದಿಂದ ಬೆಂಗಳೂರಿನಲ್ಲಿ ಕುಮಾರಸ್ವಾಮಿ ನಿವಾಸಕ್ಕೆ ಮದುವೆ ಶಿಫ್ಟ್ ಆಗಿತ್ತು. ಈಗ ಬೆಂಗಳೂರು ರೆಡ್ ಜೋನ್‍ನಲ್ಲಿದೆ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೆ ಗ್ರೀನ್ ಜೋನ್ ರಾಮನಗರಕ್ಕೆ ಮದುವೆ ಶಿಫ್ಟ್ ಮಾಡಿದ್ದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆಗೆ ಕೇವಲ ಕುಟುಂಬದವರು ಹಾಗೂ ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪೊಲೀಸರು ಕೂಡ ಪ್ರತಿ ವಾಹನಗಳನ್ನು ತಡೆದು ಪರಿಶೀಲಿಸಿ ಕಳುಹಿಸುತ್ತಿದ್ದಾರೆ. ಪ್ರವೇಶಕ್ಕೆ ಅನುಮತಿ ಪಡೆದಿರುವವರಿಗಷ್ಟೇ ಕಾರ್ ನಂಬರ್ ನೋಡಿ ಪೊಲೀಸರು ಒಳಗೆ ಹೋಗಲು ಅವಕಾಶ ಮಾಡಿಕೊಡುತ್ತಿದ್ದಾರೆ.