ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಪೊಲೀಸರ ಮುಂದೆ ಶರಣಾಗಿದ್ದು, ಆತನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಇದರ ಬೆನ್ನಲ್ಲೇ ಆತನ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿದ್ದ ಬೆನ್ನಲ್ಲೇ ಅಂದು ಮಧ್ಯಾಹ್ನ 2.30ಕ್ಕೆ ಇಂಡಿಗೋ ವಿಮಾನ ಸಂಸ್ಥೆಯ ಮ್ಯಾನೇಜರ್ಗೆ ಅನಾಮಧೇಯ ಕರೆಯೊಂದು ಬಂದಿತ್ತು. ಮಂಗಳೂರಿನಿಂದ ಹೈದರಾಬಾದ್ಗೆ ತೆರಳುವ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ವ್ಯಕ್ತಿ ಬೆದರಿಕೆಯೊಡ್ಡಿದ್ದ. ವಿಷಯ ತಿಳಿಯುತ್ತಿದ್ದಂತೆ ವಿಮಾನದಲ್ಲಿದ್ದವರನ್ನೆಲ್ಲ ಕೆಳಗಿಳಿಸಿ, ಬಾಂಬ್ಗಾಗಿ ಹುಡುಕಾಟ ನಡೆಸಲಾಗಿತ್ತು. ನಂತರ ಅದೊಂದು ಹುಸಿಕರೆ ಎಂಬುದು ಗೊತ್ತಾಗಿತ್ತು
.
ತಮಗೆ ಫೋನ್ ಮಾಡಿ ಬೆದರಿಕೆಯೊಡ್ಡಿದ್ದು ಇದೇ ಆದಿತ್ಯ ರಾವ್ ಎಂದು ಇಂಡಿಗೋ ಸಂಸ್ಥೆಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆದಿತ್ಯ ರಾವ್ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಆದಿತ್ಯ ರಾವ್ ಬೆಂಗಳೂರಿನಲ್ಲಿ ಡಿಜಿ ಐಜಿಪಿ ಮುಂದೆ ಶರಣಾಗಿದ್ದು, ಘಟನೆ ಹಿಂದೆ ಉಗ್ರರ ಕೈವಾಡವಿಲ್ಲ. ತಾನೊಬ್ಬನೇ ಈ ಕೃತ್ಯವೆಸಗಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಆರೋಪಿ ಆದಿತ್ಯ ರಾವ್ ನನ್ನು ವಶಕ್ಕೆ ಪಡೆದಿರುವ ಮಂಗಳೂರು ಪೊಲೀಸರು, ಉತ್ತರ ಎಸಿಪಿ ಕಛೇರಿಯಲ್ಲಿ ತೀವ್ರ ವಿಚರಾಣೆಗೊಳಪಡಿಸಿದ್ದು, ಈ ವೇಳೆ ಆತ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾನೆ. ಬಾಂಬ್ ಇಟ್ಟ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾದವು. ಸಿಕ್ಕಿ ಬೀಳುವ ಭಯ ಶುರುವಾಗಿತ್ತು. ಘಟನೆ ಬಳಿಕ ತಪ್ಪಿನ ಅರಿವಾಗಿತ್ತು. ನಾನು ದೇಶದ್ರೋಹಿ ಕೆಲಸ ಮಾಡುವವನಲ್ಲ. ವ್ಯವಸ್ಥೆ ಹಾಳಾಗಿರುವುದನ್ನು ಸರಿಪಡಿಸಬೇಕೆಂದು ಬಾಂಬ್ ಇಟ್ಟೆ ಎಂದಿದ್ದಾನೆ.
ಈ ಕೃತ್ಯದ ಹಿಂದೆ ಬೇರೆ ಯಾರ ಕೈವಾಡವೂ ಇಲ್ಲ. ಬಾಂಬ್ ಇಡುವ ಬಗ್ಗೆ ನಾನು ಯಾರಿಗೂ ಮಾಹಿತಿ ನೀಡಿಲ್ಲ. ಒಂದೇ ಬಾಂಬ್ ತಯಾರಿಸಿ ಇಟ್ಟಿದ್ದೆ. ತಾನೊಬ್ಬನೇ ಮಾಸ್ಟರ್ ಮೈಂಡ್ ಎಂದು ತಿಳಿಸಿದ್ದಾನೆ. ಅಲ್ಲದೇ ಇತ್ತೀಚೆಗೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಬಂಧಿಸುವ ಪ್ರಕರಣಗಳು ಹೆಚ್ಚಾಗಿವೆ. ನನಗೂ ಗುಂಡು ಹೊಡೆಯಬಹುದು ಎಂಬ ಭಯವಿತ್ತು. ಹೀಗಾಗಿ ಡಿಜಿಪಿ ಕಚೇರಿಗೆ ಬಂದು ಶರಣಾಗಿರುವುದಾಗಿ ಹೇಳಿದ್ದಾನೆ.