ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಮಹದಾಯಿ ಯೋಜನೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಲ್ಲಿ ಟೀಮ್ ಬಿಜೆಪಿ ಯಶಸ್ವಿಯಾಗಿದೆ. ತನ್ಮೂಲಕ, ತಡವಾದರೂ ತಂಡ ಕಿರೀಟ ಮುಡಿಗೇರಿಸಿಕೊಂಡಿದೆ. ಜೊತೆಗೆ, ರಾಜ್ಯ ಜಲಸಂಪನ್ಮೂಲ ಸಚಿವರಾಗಿ ಅಧಿಕಾರವಹಿಸಿಕೊಂಡ ನಂತರ ರಮೇಶ ಜಾರಕಿಹೊಳಿಗೆ ಮೊದಲ ದೊಡ್ಡ ಗೆಲುವು ಸಿಕ್ಕಂತಾಗಿದೆ.
ಮಹದಾಯಿ ಹೋರಾಟ ಇಂದು-ನಿನ್ನೆಯದಲ್ಲ. ಹಲವು ದಶಕಗಳ ಹೋರಾಟವಿದು. ಇದೀಗ ನ್ಯಾಯಾಧಿಕರಣದ ತೀರ್ಪಿನ ಗೆಜೆಟ್ ನೋಟಿಫಿಕೇಶನ್ ಹೊರಡಿಸುವ ಮೂಲಕ ಮೊದಲ ಜಯ ಕರ್ನಾಟಕದ ಪಾಲಿಗಾದಂತಾಗಿದೆ. ಮುಂದೆ ಸರ್ವೋಚ್ಛ ನ್ಯಾಯಾಲಯದಲ್ಲಿ ಹೋರಾಟ ಇದ್ದೇ ಇದೆ.
ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ 2 ದಿನದ ಹಿಂದೆ ಬಿಜೆಪಿ ಟೀಮ್ ಜೊತೆ ನವದೆಹಲಿಗೆ ತೆರಳಿ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗೋವಾದ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಿದಂತಾಗಿದೆ
ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ ಜೋಶಿ, ರಾಜ್ಯ ಗೃಹ ಸಚಿವರೂ, ಮಾಜಿ ಜಲಸಂಪನ್ಮೂಲ ಸಚಿವರೂ ಆಗಿರುವ ಬಸವರಾಜ ಬೊಮ್ಮಾಯಿ, ಕೈಗಾರಿಕೆ ಸಚಿವರೂ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಜಗದೀಶ ಶೆಟ್ಟರ್ ತಂಡದಲ್ಲಿದ್ದರು. ಗುರುವಾರ ರಾತ್ರಿ ಈ ಎಲ್ಲ ನಾಯಕರೂ ಸೇರಿ ಕೇಂದ್ರ ಜಲಸಂಪನ್ಮೂಲ ಸಚಿವರಿಂದ ಗೆಜೆಟ್ ಪ್ರತಿ ಸ್ವೀಕರಿಸಿದ್ದಾರೆ.
ಟೀಮ್ ಸ್ಫಿರಿಟ್ ನಿಂದಾಗಿ ಕೆಲಸವಾಗಿದೆ. ಇದು ಮುಂದುವರಿಯಬೇಕು. ಮಹದಾಯಿ ಅಂತಿಮ ಹೋರಾಟದಲ್ಲೂ ಎಲ್ಲ ನಾಯಕರೂ ಒಟ್ಟಾಗಿ ಕೆಲಸ ಮಾಡಬೇಕು. ಕೇವಲ ಮಹದಾಯಿ ವಿಷಯದಲ್ಲಷ್ಟೇ ಅಲ್ಲ, ಬೇರೆ ಎಲ್ಲ ಅಭಿವೃದ್ಧಿ ವಿಷಯದಲ್ಲೂ ಇದೇ ಸ್ಫಿರಿಟ್ ಮತ್ತು ಒಗ್ಗಟ್ಟು ಮುಂದುವರಿಯಬೇಕು. ಕೇಂದ್ರದ ಮೇಲೆ ಒತ್ತಡ ತರಲು ಇಂತಹ ತಂಡ ಇದ್ದರೆ ಮಾತ್ರ ಸಾಧ್ಯ.