ವಿಜಯಪುರ, ಫೆ.22- ಬೆಂಕಿಪೊಟ್ಟಣ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ಅರಕೇರಿ ತಾಂಡಾ ಬಳಿಯ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಬೆಳ್ಳಂ ಬೆಳಗ್ಗೆ ನಡೆದಿದೆ. ತಮಿಳುನಾಡಿನಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಬೆಂಕಿಪೊಟ್ಟಣಗಳನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಚಾಲಕ ಹಾಗೂ ಕ್ಲೀನರ್ ಎಚ್ಚೆತ್ತುಕೊಂಡು ಲಾರಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಪೊಟ್ಟಣದ ಬಾಕ್ಸ್‍ಗಳಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆಗಸದೆತ್ತರಕ್ಕೆ ಚಿಮ್ಮಿದ ಬೆಂಕಿಯ ಕೆನ್ನಾಲಿಗೆಗೆ ನೋಡು ನೋಡುತ್ತಿದ್ದಂತೆಯೇ ಲಾರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಲಾರಿ ಹೊತ್ತಿ ಉರಿದಿದೆ.
ಸುದ್ದು ತಿಳಿದ ಕೂಡಲೇ ವಿಜಯಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.ಬೆಂಕಿಪೊಟ್ಟಣ ಹಾಗೂ ಲಾರಿ ಸೇರಿದಂತೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.