ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ ತುಳಿದಿದೆ.
ಚಲನಚಿತ್ರ ನಟ ನಟಿಯರಾಗಿರುವ ಅರ್ನವ್ ವಿನ್ಯಾಸ್ ಮತ್ತು ವಿಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಲೆನಾಡಿನ ತವರೂರು ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂದಹಾಗೆ ಅರ್ನವ್ ವಿನ್ಯಾಸ್ ಹೊಂಬಣ್ಣ ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಮಿಂಚಿದ್ದು, ಅದೇ ರೀತಿ ಹೀರೋಯಿನ್ ವಿಹಾನಾ ನೆನಪುಗಳು ಎಂಬ ಚಲನಚಿತ್ರದಲ್ಲಿ ನಟಿಸಿ, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಮಂಡ್ಯ ಮೂಲದ ನಟ ಅರ್ನವ್ ವಿನ್ಯಾಸ್, ಶಿವಮೊಗ್ಗದ ವಿಹಾನಾ ಅವರನ್ನು ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇಂದು ಕೇವಲ ಈ ಇಬ್ಬರ ಕುಟುಂಬಸ್ಥರ ಬೆರಳೆಣಿಕೆಯಷ್ಟು ಜನರ ನಡುವೆಯೇ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.
ಶಿವಮೊಗ್ಗದ ಹೊರವಲಯದಲ್ಲಿರುವ ಸೋಶಿಯಲ್ ಹಾರ್ಬರ್ ಎಂಬ ಸುಂದರ ಪ್ರಕೃತಿಯ ಮಧ್ಯೆ ಈ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಾಸ್ಕ್ ಧರಿಸಿಯೇ ವಿವಾಹವಾಗಿದ್ದಾರೆ. ಅಲ್ಲದೆ ಕೇವಲ ಮನೆ ಸದಸ್ಯರ ಹಾಜರಿ ನಡುವೆ ಮದುವೆ ಶಾಸ್ತ್ರ ನೆರವೇರಿಸಲಾಗಿದ್ದು, ವಾಲಗ ಮತ್ತು ವಿಡಿಯೋದವರು ಕೂಡ ಮಾಸ್ಕ್ ಧರಿಸಿಯೇ ಹಾಜರಗಿದ್ದರು. ಬೆರಳೆಣಿಕೆಯಷ್ಟು ತಮ್ಮ ಕುಟುಂಬದವರ ಜೊತೆ ಈ ಸ್ಯಾಂಡಲ್‍ವುಡ್ ತಾರೆಯರು ಹೊಸ ಜೀವನವನ್ನು ಆರಂಭಿಸಿದ್ದಾರೆ.