ಬೆಂಗಳೂರು : ಲಾಕ್ ಡೌನ್ ತೆರವುಗೊಳಿಸುವ ಸಂಬಂಧ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರ ಹೇಳಿದೆ. ಆದರೆ, ಕೋವಿಡ್-19 ಹಾಟ್ ಸ್ಪಾಟ್ ಗಳಲ್ಲಿ ಕನಿಷ್ಠ ಎರಡು ವಾರಗಳವರೆಗೆ ವಿಸ್ತರಿಸುವ ಕಡೆಗೆ ಒಲವು ವ್ಯಕ್ತಪಡಿಸಿದೆ.
ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮತ್ತೊಂದಿಷ್ಟು ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸುವ ಅಗತ್ಯತೆ ಬಗ್ಗೆ ಎದುರು ನೋಡಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಸ್ತುತ ಪರಿಸ್ಥಿತಿ ಆಧಾರದ ಮೇಲೆ ಲಾಕ್ ಡೌನ್ ತೆರವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸುಧಾಕರ್, ಒಂದೇ ಬಾರಿಗೆ ಲಾಕ್ ಡೌನ್ ತೆರವುಗೊಳಿಸಲಾಗದು, ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ರೆಡ್ ಅಲರ್ಟ್ ಹಾಗೂ ವಲಯಗಳಲ್ಲಿ ಎರಡು ವಾರಗಳ ಕಾಲ ಈ ಮಾಸಾಂತ್ಯದವರೆಗೂ ವಿಸ್ತರಿಸಬೇಕೆಂಬುದು ತಮ್ಮ ಅಭಿಪ್ರಾಯವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಬಳಿ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಲಾಕ್ ಡೌನ್ ನಿಂದಾಗಿ ಆದಾಯ ಕುಂಠಿತಗೊಂಡಿದ್ದು, ಸರ್ಕಾರ ಹಣಕಾಸಿನ ಸವಾಲ್ ಎದುರಿಸುತ್ತಿದೆ ಆದಾಗ್ಯೂ, ವೆಚ್ಚ ಕಡಿತದಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ವಿತ್ತಿಯ ಸ್ಥಿತಿಗತಿ ಪರಾಮರ್ಶೆ ಪ್ರಕ್ರಿಯೆಯನ್ನು ಹಣಕಾಸು ಇಲಾಖೆ ನಡೆಸುತ್ತಿದೆ ಎಂದು ಸುಧಾಕರ್ ತಿಳಿಸಿದರು