“ನೋಡುಗನ ಹಿಡಿತಕ್ಕೆ ಸಿಗದ ಮಂಕಿ!”
ಸಿನಿಮಾ ಎಂದರೆ ಐದು ಹಾಡು,ನಾಲ್ಕು ಫೈಟು, ಬಿಲ್ಡಪ್ ಕೊಡೋ ಡೈಲಾಗ್ಸು, ಕಾಮಿಡಿ, ರೋಮ್ಯಾನ್ಸ್ ಮಾತ್ರ ಅಂದುಕೊಂಡವರಿಗೆ ಪಾಪಕಾರ್ನ್ ಮಂಕಿ ಟೈಗರ್ ಸಿನಿಮಾ ರುಚಿಸುವುದಿಲ್ಲ. ಸಿನಿಮಾ ಆರಂಭವಾಗಿ ಪ್ರಥಮಾರ್ಧ ಮುಗಿಯುಷ್ಟರಲ್ಲಿ ಅಂಥವರ ತಾಳ್ಮೆ ಸತ್ತು ಹೋಗಿರುತ್ತದೆ. ಅದು ಸಿನಿಮಾದ ಮಿತಿಯೂ ಹೌದು, ತಾಕತ್ತೂ ಹೌದು.
ಈವರೆಗೆ ಸುಕ್ಕಾ ಸೂರಿ ನಿರ್ದೇಶನದ ಬಹುತೇಕ ಚಿತ್ರಗಳಲ್ಲಿರುವಂತೆ ಈ ಸಿನಿಮಾದಲ್ಲಿ ಹೇರಳವಾಗಿ ಹೆಂಡ, ಹೆಣ್ಣು, ಸಿಗರೇಟಿನ ಘಾಟು, ಪೇಟಿಂಗನಂತೆ ಕಾಣುವ ದೃಶ್ಯಾವಳಿಗಳಿವೆ. ಆದರೆ ಚೆಂದದ ಹಾಡುಗಳಿಲ್ಲ. ಸಿದ್ಧ ಮಾದರಿಯ ಕತೆ ಹೇಳುವ ಶೈಲಿಯಿಂದ ಬಹುದೂರ ಸಾಗಿರುವ ಓರ್ವ ಸೃಜನಶೀಲ ನಿರ್ದೇಶಕನ ಅತ್ಯಂತ ದುಬಾರಿ ಪೇಂಟಿಗ್ ಇದು.
……ಟೈಗರ್ ಹೊಸ ಪ್ರಯೋಗ. ಯಾವ ದೃಶ್ಯ ಎಲ್ಲಿಗೆ ಸಿಂಕ್ ಆಗತ್ತೆ ಅನ್ನೋದೆ ತಿಳಿಯದ ಹಾಗೆ ಸಿನಿಮಾ ಎಡಿಟ್ ಮಾಡಲಾಗಿದೆ. ಸಿನಿಮಾ ನೋಡಲು ಕುಳಿತವನು ತಿಂದ ಗುಟ್ಖಾ ಉಗಿಯಲು ಮುಖ ಕೆಳಗೆ ಮಾಡಿದರೂ ಸಿನಿಮಾದ ಲಿಂಕ್ ತಪ್ಪಿ ಹೋಗುವ ಚಾನ್ಸ್ ಇದೆ ಅನ್ನೋದಂತೂ ಖರೇ. ಆ ಲೆಕ್ಕಕ್ಕೆ ಸಿನಿಮಾ ಚಕಚಕ ಓಡತ್ತೆ. ಅಸಲು ಸಿನಿಮಾದಲ್ಲಿ ಕತೆ ಇದೆಯೇ? ಖಂಡಿತ ಇದೆ. ಆದರೆ ಅದು ಒಮ್ಮೆಲೆ ಹೃದಯಕ್ಕೋ,ಮನಸ್ಸಿಗೋ ಇಳಿಯುವುದಿಲ್ಲ. ಚದುರಿದ ಚಿತ್ರಗಳನ್ನು ನೀಟಾಗಿ ಜೋಡಿಸಿದರೆ ಹೇಗೆ ಒಂದು ಸುಂದರ ಕೊಲಾಜ್ ಸೃಷ್ಟಿಯಾಗುತ್ತದೋ ಹಾಗೆ ಪಾಪಕಾರ್ನ ಮಂಕಿ ಟೈಗರ್ ಕೂಡ. ಆದರೆ ಅಷ್ಟೊಂದು ತಾಳ್ಮೆಯಿಂದ ಸಿನಿಮಾ ನೋಡೋದು ಪ್ರೇಕ್ಷಕನಿಗೆ ಸಾಧ್ಯವೇ ಅನ್ನೋದೆ ಸವಾಲು. ಕತೆ ಹೇಳುವ, ದೃಶ್ಯ ಪೋಣಿಸುವ ಮಾದರಿಯಲ್ಲಿ ಸೂರಿ ಮಾಡುವ ಹೊಸ ಹೊಸ ಪ್ರಯೋಗಗಳು ಸಿದ್ಧ ಮಾದರಿಯ ಸಿನಿಮಾ ನೋಡುವ ರೆಗ್ಯುಲರ್ ಪ್ರೇಕ್ಚಕರಿಗೆ ಜೀರ್ಣವಾಗುವುದಿಲ್ಲ. ಅದು ಈ ಮೊದಲು ಸಾಬೀತಾಗಿದೆ. ಟಗರು ಸಿನಿಮಾದಲ್ಲೂ ಸೂರಿ ಆ ಪ್ರಯತ್ನ ಮಾಡಿದ್ದರೂ ಕತೆ, ಸ್ಟಾರ್ ಕಾಸ್ಟ್, ಚೆಂದದ ಹಾಡುಗಳ ಮೂಲಕ ಆ ಸಿನಿಮಾ ಭರಪೂರ ಗೆದ್ದಿತ್ತು. ಆದರೆ ಪಾಪಕಾರ್ನ್ ಮಂಕಿಯಲ್ಲಿ ಅವ್ಯಾವೂ ಇಲ್ಲ. ಇಲ್ಲಿ ಸಿನಿಮಾ ಮಾತ್ರ ಇದೆ. ಬರೀ ಸಿನಿಮಾ. ಚೆಂದ ಚೆಂದ ಲೇಖನ ಬರೆಯುತ್ತಿದ್ದ ಲೇಖಕನೋರ್ವ ಯಾವುದೋ ಘಳಿಗೆಯಲ್ಲಿ ಲಹರಿಯಂಥ ಬರಹ ಸೃಷ್ಟಿಸಿ ಗೊಂದಲಕ್ಕೀಡು ಮಾಡುತ್ತಾನಲ್ಲ? ಅದೇ ಪ್ರಯತ್ನ ಇಲ್ಲೂ ಆಗಿದೆ.
ಆದರೂ ಸಿನಿಮಾದಲ್ಲಿ ಒಂದಷ್ಟು ಗಮನ ಸೆಳೆಯುವ ಅಂಶಗಳಿವೆ. ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ರೌಡಿಸಂ ಬೆನ್ನತ್ತುವ ಹುಂಬ ಹುಡುಗರು ಏನೆಲ್ಲ ಸಮಸ್ಯೆ ಅನುಭವಿಸಿ ಸತ್ತು ಹೋಗುತ್ತಾರೆ ಎಂಬುದುನ್ನು ಸೂರಿ ಸೂಕ್ಷ್ಮವಾಗಿ ಹೇಳಿದ್ದಾರೆ. ಒಂದಾದರ ಮೇಲೆ ಒಂದು ಹೆಣ್ಣಿನ ಸಂಗ ಮಾಡುವ ಮಂಕಿ ಸೀನ ಕೊನೆಗೂ ಅತೃಪ್ತನಾಗಿಯೇ ಹೆಣವಾಗುವುದು, ಮಗುವನ್ನು ಕಳೆದುಕೊಂಡ ದೇವಿ ಕಾಲನ ಹೊಡೆತಕ್ಕೆ ಸಿಲುಕಿ ಉಡಾಳಿ ದೇವಕಿ ಆಗಿ ಬದಲಾಗೋದು, ವಿಧ್ಯುಕ್ತ ಮದುವೆಯಾಗಿ ಬಂದರೂ ಸೀನ ಹಾಗೂ ಆತನ ತಾಯಿಯನ್ನು ಮೊಂಡುತನ ಹಾಗೂ ಹರಕು ಬಾಯಿಯಿಂದ ಚುಚ್ಚುವ ಸುಜಾತ ನೋಡುಗನ ಮನಪಟಲ ತಾಕುವ ಅಂಶಗಳು.
ಚರಣರಾಜ್ ಸೃಜಿಸಿದ ಹಿನ್ನೆಲೆ ಸಂಗೀತ ಹಾಗೂ ಸೂರಿಯ ಫಿಲಾಸಫಿಕಲ್ ದಾಟಿಯ ಸಂಭಾಷಣೆ ಈ ಸಿನಿಮಾದ ನಿಜವಾದ ತಾಕತ್ತು. ಶೇಖರ್ ಛಾಯಾಗ್ರಹಣ ಈ ಸಿನಿಮಾದ ಒಟ್ಟು ಅಂದ ಹೆಚ್ಚಿಸುವ ಕಸಬುದಾರಿಕೆಯ ಭಾಗ. ಇರುವ ಒಂದೇ ಒಂದು ಹಾಡು ಪಡ್ಡೆಗಳಿಗೆ ಇಷ್ಟವಾಗುವ ಗುಣದ್ದು. ಕೊನೆಗೆ ಸಿನಿಮಾ ನೋಡಬೇಕಾ ಬೇಡವಾ ಎಂಬುದನ್ನು ಸಿನಿಮಾ ನೋಡಿಯಾದ ಮೇಲೆ ಡಿಸೈಡು ಮಾಡಬೇಕಷ್ಟೇ. ಹಾಗಿದೆ ಟೈಗರ್ ಪರಿಸ್ಥಿತಿ. ಸೀನನಾಗಿ ಧನಂಜಯ್ ಜಬರ್ದಸ್ತ್, ದೇವಕಿ ನಿವೇದಿತಾ ನೆನಪುಳಿಯುತ್ತಾರೆ. ಉಳಿದಂತೆ ಕಾಕ್ರೋಚ್ ಸುಧಿ, ಮೂಗ ಗೌತಮ್, ರೇಜರು, ಕಲೈ, ಕೊತ್ಮಿರಿ, ಸುಮಿತ್ರಾ, ಸುಜಾತ, ಶುಗರ್ರು ಇತ್ಯಾದಿ ಪಾತ್ರಗಳು ಮಜ ಕೊಡ್ತವೆ.
ಕೆಂಡ ಸಂಪಿಗೆಯಲ್ಲಿ ಹಣ ತುಂಬಿದ ಬ್ಯಾಗಿನೊಂದಿಗೆ ಹೊರಬಿದ್ದ ಸಿದ್ದಿ ಪ್ರಶಾಂತ ಇಲ್ಲೂ ಇದಾರೆ. ಅದೇ ಬ್ಯಾಗು ಇಲ್ಲೂ ಇದೆ. ಇದು ಸಂಪಿಗೆಯ ಮುಂದುವರಿದ ಕತೆಯೇ ಎಂಬುದಕ್ಕೆ ಸಣ್ಣ ಕ್ಲೂಗಳು ಇವೆ. ಆದರೆ ಅದಕ್ಕೆ ಲಾಜಿಕಲ್ ಆದ ಪುರಾವೆಗಳಿಲ್ಲ.
ಸಿನಿಮಾ ಮುಗಿದ ಮೇಲೆ ‘ಕಾಗೆ ಬಂಗಾರ-2 (2020) destroy the entire city ಎಂಬ ಬರಹ ಪರದೆ ಮೇಲೆ ಕಾಣಿಸುತ್ತದೆ. ಹಾಗಾದರೆ ಸೂರಿ ಎಲ್ಲದಕ್ಕೂ ಉತ್ತರವನ್ನು ಅದೇ ಸಿನಿಮಾದಲ್ಲಿ ಕೊಡ್ತಾರಾ ಅನ್ನೋ ಸಂಶಯ ಮೂಡದೆ ಇರದು. ಎಲ್ಲರೂ ನೋಡಿ ಅನ್ನಲಾರೆ. ಆದರೆ ನೋಡಬಹುದಾದ ಸಿನಿಮಾ ಅಂಥ ಮಾತ್ರ ಹೇಳಬಲ್ಲೆ.